ಸೌದಿ ಅರೇಬಿಯಾದ 2023ರ ಹಜ್ ವೇಳೆ ಕೇಂದ್ರೀಯ ಸಶಸ್ತ್ರ ಪಡೆಯವರ ನಿಯೋಜನೆ ಮಾತ್ರ ಏಕೆ?

Prasthutha|

ನವದೆಹಲಿ: ಹಜ್ ಕಚೇರಿಗಳ ಅಧಿಕಾರಿಗಳಾಗಿ ನಿಯೋಜನೆ ಮಾಡುವ ಬಗ್ಗೆ ದಿಲ್ಲಿ ಹೈಕೋರ್ಟಿನ ವಕೀಲರಾದ ರಯೀಸ್ ಅಹ್ಮದ್ ಅವರು ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವೆಗೆ ಪತ್ರ ಬರೆದಿದ್ದಾರೆ.
“ಸೌದಿ ಅರೇಬಿಯಾದ ಹಜ್ 2023ರಲ್ಲಿ ಸೇವೆ ಸಲ್ಲಿಸಲು ಕೇಂದ್ರೀಯ ಸಶಸ್ತ್ರ ಪೋಲೀಸರಿಂದ ಮಾತ್ರ ಅರ್ಜಿ ಕರೆದಿರುವುದು ಮೂಲಭೂತ ಹಕ್ಕುಗಳಿಗೆ ವಿರೋಧವಾದುದಾಗಿದೆ. ಇತರ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ಬೇಕು’ ಎಂದು ಪತ್ರದಲ್ಲಿ ರಯೀಸ್ ಆಗ್ರಹಿಸಿದ್ದಾರೆ.
ಹಜ್ ಯಾತ್ರೆಯ ಸಂದರ್ಭದಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಆದರೆ ಈ ವರ್ಷ ಸಿಎಪಿಯವರಿಗೆ ಮಾತ್ರ ಅವಕಾಶ ಎಂದಿರುವುದು ತಾರತಮ್ಯ ನೀತಿಯಾಗಿದೆ ಎಂದು ರಯೀಸ್ ಅಹ್ಮದ್ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಭಾರತವು ಒಂದು ಪ್ರಜಾಪ್ರಭುತ್ವ ದೇಶವಾಗಿದೆಯೇ ಹೊರತು ಸೇನಾಡಳಿತದ ಅಡಿ ಇಲ್ಲ. ಹಿಂದಿನ ಸರಕಾರಗಳ ಅವಧಿಯಲ್ಲಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಇಲಾಖೆಯವರಿಗೆ ಅವಕಾಶ ನೀಡಲಾಗಿತ್ತು.” ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಆದೇಶವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಕೀಲ ರಯೀಸ್ ಹೇಳಿದ್ದಾರೆ.
ಕೂಡಲೆ ಆದೇಶಕ್ಕೆ ತಿದ್ದುಪಡಿ ತಂದು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಸ್ಲಿಮ್ ನೌಕರರಿಗೂ ಸೇವಾ ನಿಯೋಜನೆ ಅವಕಾಶ ಕಲ್ಪಿಸಬೇಕು ಎಂದು ಅವರು ಕೇಳಿದ್ದಾರೆ.

- Advertisement -