ಗುಜರಾತ್ : 2017ರ ಬಜೆಟ್ ಭಾಷಣದಲ್ಲಿ ಆಗಿನ ಮುಖ್ಯಮಂತ್ರಿ ವಿಜಯ್ ರೂಪಾನಿ, ಗುಜರಾತ್ ಸಸ್ಯಾಹಾರಿ ರಾಜ್ಯವಾಗಲಿದೆ ಎಂದು ಘೋಷಣೆ ಮಾಡಿದ್ದರು. ಅದರ ಬೆನ್ನಿಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ, ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯ ನಿಯಮ ಮಾಡಲಾಯಿತು. ಇದನ್ನು ಚುನಾವಣೆಗೆ ಕೆಲವೇ ತಿಂಗಳ ಮೊದಲಷ್ಟೇ ಜಾರಿಗೆ ತರಲಾಯಿತು.
ಅಹಮದಾಬಾದ್ ಮೊದಲಾದ ಕಡೆ ಹೇರಲಾದ ಲಾಕ್ ಡೌನ್ ಹಲವು ರೆಸ್ಟೋರೆಂಟುಗಳನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡಿತು. ಕೆಲವು ಮರು ಆರಂಭವಾದರೂ ಕೆಲವಂತೂ ಆರ್ಥಿಕತೆಯ ಕಾರಣಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಕಳೆದ ಎರಡು ವಾರಗಳಲ್ಲಿ ಗುಜರಾತಿನಲ್ಲಿ ಮಾಂಸಾಹಾರದ ಬಗ್ಗೆ ಕೆಲವು ನಾಟಕಗಳು ನಡೆದವು. ರಾಜಕೋಟ್, ವಡೋದರಾ, ಬಾವನಗರ, ಅಹಮದಾಬಾದ್ ಮಹಾನಗರ ಪಾಲಿಕೆಗಳು, ಯಾರೂ ನಗರಗಳಲ್ಲಿ ಗಾಡಿಗಳಲ್ಲಿ ಮಾಂಸಾಹಾರ ಮಾರಬಾರದು ಎಂದು ನಿಯಮ ಜಾರಿಗೆ ತಂದವು. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸಿ. ಆರ್. ಪಾಟೀಲ್ ಅವರು ನಗರದ ಬಿಜೆಪಿ ಕಾರ್ಯಕರ್ತರಲ್ಲಿಗೆ ಧಾವಿಸಿ, ಎಲ್ಲೂ ಮಾಂಸಾಹಾರಕ್ಕೆ ನಿಷೇಧ ಹೇರಿಲ್ಲ, ಎಲ್ಲರಿಗೂ ಅವರವರಿಗಿಷ್ಟದ ಆಹಾರ ಸೇವಿಸಲು ಅವಕಾಶ ಹಕ್ಕು ಇದೆ, ತಡೆಯಬೇಡಿ ಎಂದು ಆದೇಶಿಸಿದರು.
ಕಟ್ಟುಕತೆ ಮತ್ತು ವಾಸ್ತವ
2003ರಲ್ಲಿ ಗುಜರಾತ್ ಆಗ ತಾನೇ ಹಿಂದಿನ ವರ್ಷದ ಗಲಭೆಯಿಂದ ಚೇತರಿಸಿಕೊಳ್ಳುತ್ತಿತ್ತು. ಈಗಿನ ಗೃಹ ಮಂತ್ರಿ ಅಮಿತ್ ಶಾ ಆಗ ಗುಜರಾತಿನಲ್ಲಿ ಗೃಹ ಸಚಿವರಾಗಿದ್ದರು. ಅವರ ಅಣತಿಯಂತೆ ಜೈನರಾಗಿದ್ದ ಅಹಮದಾಬಾದಿನ ಎಲ್ಲಿಸ್ ಬ್ರಿಡ್ಜ್ ಕ್ಷೇತ್ರದ ಶಾಸಕರಾದ ಬಾವಿನ್ ಸೇಟ್ ಅವರು ಆ ಸುತ್ತಿನ ಎಲ್ಲ ಮಾಂಸಾಹಾರದ ಗಾಡಿಗಳನ್ನು ವಶಪಡಿಸಿಕೊಂಡರು. ಆ ಗಾಡಿಗಳನ್ನು ಇವತ್ತಿಗೂ ಸಂಬಂಧಿಸಿದವರಿಗೆ ಹಿಂದಿರುಗಿಸಿಲ್ಲ. ಇಲ್ಲಿ ಜೈನರು ತೀರಾ ಕಡಿಮೆ ಸಂಖ್ಯೆಯಲ್ಲಿ ಇರುವರಾದರೂ ರಾಜಕೀಯವಾಗಿ, ಆರ್ಥಿಕವಾಗಿ ಬಲಾಢ್ಯರು. ಗುಜರಾತಿನಲ್ಲಿ ಮಾಮೂಲಿ ಸಸ್ಯಾಹಾರವಲ್ಲದೆ ಜೈನರ ಈರುಳ್ಳಿ, ಬೆಳ್ಳುಳ್ಳಿಯಂಥ ಪದಾರ್ಥ ಬಳಸದ ವಡ ಪಾವ್, ಪಿಜ್ಜಾಗಳು ಕೂಡ ದೊರೆಯುತ್ತವೆ. ಗುಜರಾತಿನಲ್ಲಿ ಸ್ವಾಮಿ ನಾರಾಯಣ ನಂಬಿಕೆಯ ಪಂಗಡದವರು ಕೂಡ ಹೆಚ್ಚುತ್ತಿರುವುದರಿಂದ ಅವರು ಕೂಡ ಇಂಥ ವಡ ಪಾವ್, ಪಿಜ್ಜಾಗಳಿಗೆ ಗ್ರಾಹಕರಾಗಿದ್ದಾರೆ.
ಗುಜರಾತಿನಲ್ಲಿ ಸಸ್ಯಾಹಾರ ಉತ್ಸವಗಳು ನಡೆಯುತ್ತಲೇ ಇವೆ. ಅದರ ನಡುವೆ ಹೆದ್ದಾರಿ ಬದಿಯ ಹೋಟೆಲು, ದಾಬಾಗಳಲ್ಲಿ ಮಸಾಲೆ ಮಟನ್ ಕರಿ, ಸಿಗಡಿ ಗಸಿ, ಪಾಪ್ಲೆಟ್ (ಪಾಂಫ್ರೆಟ್) ಫ್ರೈಗಳು ಧಾರಾಳವಾಗಿ ದೊರೆಯುತ್ತವೆ. ಅದೇ ವೇಳೆ ನಗರಗಳಲ್ಲಿ ನಿಶ್ಚಿತ ಜನರು ಹೋಗುವ ಇಂಥ ಅಡುಗೆ ಮನೆಗಳು ಸಾಕಷ್ಟು ಇವೆ. ಸಾಕಷ್ಟು ಬಿಜೆಪಿ ಕಾರ್ಯಕರ್ತರು ಇದರ ಪೋಷಕರು.
ಸಮಾಜ ವಿಜ್ಞಾನಿಗಳು ಮತ್ತು ಚರಿತ್ರಕಾರರ ಪ್ರಕಾರ, ಗುಜರಾತ್ ಸಸ್ಯಾಹಾರಿ ರಾಜ್ಯವೆಂಬುದು ದೊಡ್ಡ ಮಿಥ್ಯೆ, ಕಟ್ಟು ಕತೆ. 2014ರ ಸ್ಯಾಂಪಲ್ ರಿಜಿಸ್ಟ್ರೇಶನ್ ಸಮೀಕ್ಷೆಯ ಪ್ರಕಾರ, ಗುಜರಾತಿನ 40% ಜನರು ಮಾಂಸಾಹಾರಿಗಳು. ಇದು ಪಂಜಾಬ್ ಮತ್ತು ರಾಜಸ್ತಾನ ರಾಜ್ಯಗಳಿಗಿಂತ ಹೆಚ್ಚು. ಮುಸ್ಲಿಮರು, ಕ್ರಿಶ್ಚಿಯನರು, ಪಾರಸಿಗಳು ಮಾತ್ರ ಮಾಂಸಾಹಾರಿಗಳಲ್ಲ, ಇತರೆ ಹಿಂದುಳಿದ ಜಾತಿಗಳವರು, ದಲಿತರು ಮತ್ತು ಬುಡಕಟ್ಟು ಜನರು ಮಾಂಸಾಹಾರಿಗಳಾಗಿರುವರು.
ಗುಜರಾತ್ ದೇಶದ ಒಂದು ಪ್ರಮುಖ ಮೀನು ಉತ್ಪಾದಕ ರಾಜ್ಯ. ದೇಶದ ಮೀನು ಕೃಷಿಯಲ್ಲಿ ಗುಜರಾತಿನ ಪಾಲು 17% ಇದೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತಿನ ಖಾರ್ವಾ ಮತ್ತು ಕೋಲಿ ಓಬಿಸಿ ವರ್ಗಕ್ಕೆ ಸೇರಿದವರು ಮೀನುಗಾರ ವೃತ್ತಿಯವರು. ಅಹಮದಾಬಾದ್ ನಂಥ ನಗರಗಳಲ್ಲಿ ಜನರು ಸರಕಾರೀ ಬೆಂಬಲದ ಗುಜರಾತ್ ಫಿಶರೀಸ್ ಸೆಂಟ್ರಲ್ ಸಹಕಾರಿ ಒಕ್ಕೂಟದಿಂದ ಕೊಳ್ಳಬೇಕಿತ್ತು. ಆದರೆ ಇದು ವ್ಯವಹಾರ ಕೆಡಿಸಿದ್ದರಿಂದ ಜನ ಪ್ರತಿಭಟಿಸಿ ಕೊಳ್ಳುವುದನ್ನೇ ಬಿಟ್ಟರು
ಹಾಗಾಗಿ ಆ ಸಹಕಾರ ಒಕ್ಕೂಟವು 2014ರಿಂದ ಮೀನು ಮಾರಾಟವನ್ನು ನಿಲ್ಲಿಸಿದೆ. ಹಾಗಾಗಿ ಸಾಗುವ ವಾಹನಗಳಲ್ಲಿ ಬರುವ ಮೀನು ಅಲ್ಲಲ್ಲಿ ಸಿಗುತ್ತದೆ. ಗುಜರಾತಿನಲ್ಲಿ ಮಾಂಸಾಹಾರದ ಬಗ್ಗೆ ಹೆಚ್ಚು ಅಸಹನೆ ಹೊಂದಿರುವವರನ್ನು ಹೊಂದಿರುವ ಸ್ಥಳ ಅಹಮದಾಬಾದ್. ಹಾಗಾಗಿ ಕೋಳಿ ಮೊಟ್ಟೆ ತಿನ್ನುವವರು ಕೂಡ ಮನೆಯಲ್ಲಿ ಮಾಡುವುದಕ್ಕಿಂತ ವಾರಕ್ಕೊಮ್ಮೆ ಹೆದ್ದಾರಿಯ ಹೋಟೆಲುಗಳಿಗೆ ಹೋಗಿ ತಿಂದು ಬರುತ್ತಾರೆ. ದಿನಾ ತಿನ್ನುವವರಿಗೂ ಕೆಲವು ಅಡ್ಡಾಗಳು ರಸ್ತೆಯುದ್ದಕ್ಕೂ ಇವೆ.
ಮೋದಿ ಸರಕಾರವು ಇತ್ತೀಚೆಗೆ ಓಬಿಸಿ ಜನರನ್ನು ಹೆಚ್ಚೆಚ್ಚು ಮಂತ್ರಿಗಳಾಗಿಸಿ ದೇಶದ ಓಬಿಸಿಗಳ ಮತ ಪಡೆಯಲು ಯೋಜಿಸಿದೆ. ಇನ್ನೇನು ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಓಬಿಸಿಗಳ ಸಂಖ್ಯೆ ಅರ್ಧಕ್ಕಿಂತ ಹೆಚ್ಚು. ಮಾಂಸಾಹಾರಿಗಳ ಸಂಖ್ಯೆಯೂ 70 ಶೇಕಡಾದಷ್ಟಿದೆ. ಆದ್ದರಿಂದ ಮಾಂಸಾಹಾರ ನಿಷೇಧವು ಓಬಿಸಿಗಳನ್ನು ದೂರ ಮಾಡೀತು ಎಂಬ ಭಯವು ಈಗ ಬಿಜೆಪಿಯನ್ನು ಕಾಡುತ್ತಿದೆ.
ಮುಂದಿನ ದಿನಗಳಲ್ಲಿ ಮಾಂಸಾಹಾರಿಗಳು ಬಿಜೆಪಿ ವಿಜಯವನ್ನು ಮಗುಚಿ ಹಾಕಬಹುದು ಎಂಬ ಭಯ ಬಿಜೆಪಿಗಿದೆ. ಬಿಜೆಪಿಯ ಕೇಂದ್ರದಲ್ಲಿ ಗುಜರಾತಿಗಳು ನಿರ್ಣಾಯಕ ನೀತಿ ನಿರೂಪಕರಾಗಿರುವುದು ಬಿಜೆಪಿಯ ಓಬಿಸಿ ನಾಯಕರನ್ನು ದ್ವಂದ್ವಕ್ಕೆ ದೂಡಿದೆ. ಗುಜರಾತ್ ಭಾರತವಲ್ಲ, ಭಾರತಕ್ಕೆ ಗುಜರಾತ್ ಮಾದರಿ ಅಲ್ಲ ಎಂಬುದು ಬಿಜೆಪಿಯ ಹೆಚ್ಚಿನವರಿಗೆ ಈಗಾಗಲೇ ಅರ್ಥ ಆಗಿದ್ದರೂ ಅದಿನ್ನೂ ಬಿಜೆಪಿಯನ್ನು ತಾತ್ವಿಕವಾಗಿ ಮಾತ್ರ ಇಬ್ಭಾಗಿಸಿದೆ.
ಮಾಂಸಾಹಾರವನ್ನು ಗೋಹತ್ಯೆ ಮತ್ತು ಮದ್ಯಪಾನದಂತೆಯೇ ಅಪರಾಧ ಎಂದು ಮಾಡಲು ಕೆಲವೇ ಕೆಲವು ಬಿಜೆಪಿಗರು ಬಯಸಿದ್ದಾರೆ. ಗೋಹತ್ಯೆ ನಿಷೇಧ, ಮದ್ಯಪಾನ ನಿಷೇಧದಿಂದ ಬಿಜೆಪಿಗೆ ಮತ ಬರುತ್ತದೆ. ಆದರೆ ಮಾಂಸಾಹಾರ ನಿಷೇಧ ಮಾಡಿದಲ್ಲಿ ಬಿಜೆಪಿಯ ಮತಗಳು ಬೇರೆ ಮತಬುಟ್ಟಿ ಹುಡುಕುತ್ತವೆ.
ರೂಪಾನಿಯವರ ಕ್ಷೇತ್ರವಾದ ರಾಜಕೋಟ್, ಅಲ್ಲದೆ ವಡೋದರ, ಬಾವನಗರ, ಅಹಮದಾಬಾದಿನ ಬಿಜೆಪಿ ಮೇಯರ್ ಗಳು ಮತ್ತು ಸ್ಥಾಯಿ ಸಮಿತಿಗಳ ಮುಖ್ಯಸ್ಥರು ಗಾಡಿಗಳಲ್ಲಿ ಮಾಂಸಾಹಾರ ಮಾರುವುದನ್ನು ನಿಷೇಧಿಸಿ ಬೆದರಿಕೆ ತಂತ್ರದವರೆಗೆ ಕೆಲವು ಅಸ್ತ್ರ ಉಪಯೋಗಿಸಿದ್ದರು.
ಬಡವರಿಗೆ ಮೊಟ್ಟೆ, ಕೆಲವು ಅಗ್ಗದ ಮಾಂಸಾಹಾರಗಳೇ ಪೋಷಕಾಂಶಗಳನ್ನು ನೀಡುವ ಆಹಾರವಾಗಿವೆ. ಅವುಗಳ ನಿಷೇಧದಿಂದ ಬಡವರ ಹೊಟ್ಟೆಗೆ ಪೆಟ್ಟು ಬೀಳಲಿದ್ದು, ಅಪೌಷ್ಟಿಕತೆಯ ಸಮಾಜ ನಿರ್ಮಾಣವಾಗಲಿದೆ ಎಂದು ಸಮಾಜಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಕೆಳ ಮಧ್ಯಮ ವರ್ಗದವರು ಕೂಡ ಆಹಾರ ಸ್ವಾತಂತ್ರ್ಯದ ಬಗ್ಗೆ ಭಯ ಹೊಂದಿದ್ದಾರೆ. ಅದಕ್ಕೆ ಮಾನ್ಯತೆ ಸಿಗಬೇಕು ಎನ್ನುತ್ತಾರೆ ಅವರು. ಆದರೆ ಅವರ ಸ್ವರವು ಬಿಜೆಪಿಯ ಹಿರಿಯ ನಾಯಕರನ್ನು ಮುಟ್ಟುವ ಸಾಧ್ಯತೆ ಕಡಿಮೆ. ಹಾಗಾಗಿ ಬಿಜೆಪಿಯಲ್ಲಿ ದ್ವಂದ್ವತೆ ಮುಂದುವರಿದಿದೆ.