Home ಟಾಪ್ ಸುದ್ದಿಗಳು ಬೆಲೆ ಸ್ಪಲ್ವ ಇಳಿಸಿ ಯಾಕೆ ಬೆನ್ನು ತಟ್ಟಿಕೊಳ್ತೀರ?: ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ಬೆಲೆ ಸ್ಪಲ್ವ ಇಳಿಸಿ ಯಾಕೆ ಬೆನ್ನು ತಟ್ಟಿಕೊಳ್ತೀರ?: ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

►► ದೇಶಪ್ರೇಮಿಗಳ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿ, ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು

ಬೆಂಗಳೂರು: ಡೀಸೆಲ್, ಪೆಟ್ರೋಲ್ ಬೆಲೆ ಇಳಿಕೆಯ ಬಗ್ಗೆ ನಾನು ತಕರಾರು ಮಾಡುತ್ತಿಲ್ಲ, ಆದರೆ ಈ ವರ್ಷದ ಮಾರ್ಚ್ ನಿಂದ ಈ ವರೆಗೆ ಬೆಲೆ ಎಷ್ಟು ಹೆಚ್ಚಾಗಿದೆ? ಐದು ರಾಜ್ಯಗಳ ಚುನಾವಣೆ ಆದ ಮೇಲೆ ಬರೀ ಎರಡೇ ತಿಂಗಳಲ್ಲಿ 11 ರೂಪಾಯಿಗಿಂತ ಬೆಲೆ ಹೆಚ್ಚು ಮಾಡಿದ್ದಾರೆ. ಈಗ ಇಳಿಸಿದ್ದು ಎಷ್ಟು? ಇದು ಹೆಚ್ಚು ಮಾಡಿ, ಇಳಿಸಿದ್ದು ಅಷ್ಟೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.


2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುತ್ತಿದ್ದ ಅಬಕಾರಿ ಸುಂಕ ಎಷ್ಟಿತ್ತು ಎಂದು ನಿಮಗೆ ಗೊತ್ತಾ? ಡೀಸೆಲ್ ಮೇಲೆ 3 ರೂಪಾಯಿ 46 ಪೈಸೆ, ಪೆಟ್ರೋಲ್ ಮೇಲೆ 9 ರೂಪಾಯಿ 20 ಪೈಸೆ ಇತ್ತು. ಈಗೆಷ್ಟಿದೆ? 30 ರೂಪಾಯಿ ಸಮೀಪ ಇದೆ. ಇದನ್ನು ಹೆಚ್ಚು ಮಾಡಿದ್ದು ಯಾರು? ಮನಮೋಹನ್ ಸಿಂಗ್ ಅವರಾ ಅಥವಾ ನರೇಂದ್ರ ಮೋದಿ ಅವರಾ? ಬೆಲೆ ಸ್ಪಲ್ವ ಇಳಿಸಿ ಯಾಕೆ ಬೆನ್ನು ತಟ್ಟಿಕೊಳ್ತೀರ? ನಿಮಗೆ ಬೆಲೆ ಇಳಿಸಬೇಕು ಎಂದು ನಿಜವಾಗಿ ಇದ್ದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಅಬಕಾರಿ ಸುಂಕ ಎಷ್ಟಿತ್ತೋ ಅದಕ್ಕೆ ಸಮನಾಗಿ ಈಗಲೂ ಹಾಕಿ.
ಮೋದಿ ಅವರು ಪ್ರಧಾನಿಯಾದಾಗ ಗ್ಯಾಸ್ ಬೆಲೆ 414 ರೂಪಾಯಿ ಇತ್ತು, ಈಗ 1050 ರೂಪಾಯಿ ಆಗಿದೆ, ಇದನ್ನು ಜಾಸ್ತಿ ಮಾಡಿದ್ದು ಯಾರು ಮನಮೋಹನ್ ಸಿಂಗ್ ಅವರ? ನರೇಂದ್ರ ಮೋದಿ ಅವರ? ಆಗ ಪೆಟ್ರೋಲ್ ಬೆಲೆ 68 ರೂಪಾಯಿ, ಡೀಸೆಲ್ ಬೆಲೆ 46 ರೂಪಾಯಿ ಇತ್ತು, ಇವತ್ತು ನೂರು ರೂಪಾಯಿ ಆಗಿದೆ. ಹಾಗಾದರೆ ಬೆಲೆ ಎಲ್ಲಿ ಕಡಿಮೆ ಆಗಿದೆ ಹೇಳಿ. ಬೆಲೆ ಹೆಚ್ಚು ಮಾಡೋದೇ ಸರ್ವಸ್ಪರ್ಶಿನ? ಸರ್ವ ಸ್ಪರ್ಶ ಎಂದರೆ ಎಲ್ಲ ಜನರಿಗೆ ಒಳ್ಳೆಯದು ಮಾಡೋದು, ಸರ್ವಜನೋ ಸುಖಿನೋ ಭವಂತು ಅಂತ ಅಲ್ಲವ? ನಾನು ಅಕ್ಕಿ ಕೊಟ್ಟಿದ್ದು ಸರ್ವಸ್ಪರ್ಶಿ ಅಲ್ಲವ ಹಾಗಾದ್ರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಕೇಂದ್ರ ಸರ್ಕಾರ ರಸ್ತೆ ಸೆಸ್, ಕೃಷಿ ಸೆಸ್, ಅಭಿವೃದ್ಧಿ ಸೆಸ್ ಹಾಕುತ್ತೆ, ಇದರಲ್ಲಿ ರಾಜ್ಯ ಸರ್ಕಾರಕ್ಕೆ ಪಾಲು ಸಿಗಲ್ಲ. ಮೂಲ ಅಬಕಾರಿ ಸುಂಕದಲ್ಲಿ ಮಾತ್ರ ರಾಜ್ಯಕ್ಕೆ ಪಾಲು ಸಿಗುವುದು. ಕರ್ನಾಟಕ ರಾಜ್ಯದಿಂದಲೇ ಪ್ರತೀ ವರ್ಷ ಮೂರು ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗುತ್ತದೆ, ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್ ಟಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದರಲ್ಲಿ ನಮಗೆ ವಾಪಸು ಸಿಗೋದು ಕೇವಲ ರೂ. 47,000 ಕೋಟಿ ಮಾತ್ರ. ಉಳಿದದ್ದು ಪೂರ್ತಿ ಕೇಂದ್ರಕ್ಕೆ ಹೋಗುತ್ತದೆ. ನಾವೇ ಕೊಟ್ಟು ಮತ್ತೆ ನಾವೇ ಅವರ ಬಳಿ ಗೋಗರೆಯುತ್ತಾ, ಕ್ಯೂ ನಿಂತುಕೊಳ್ಬೇಕು.

ಎರಡು ವರ್ಷದಿಂದ ಪಕ್ಷ ಕಟ್ಟಿದೀನಿ, ಈಗ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಎಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಇದನ್ನೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ, ಬಹಿರಂಗವಾಗಿ ಚರ್ಚೆ ಮಾಡುವ ವಿಷಯ ಅಲ್ಲ ಎಂದರು.


ಕುವೆಂಪು ಅವರ ಬಗ್ಗೆ, ನಾಡಗೀತೆ ಬಗ್ಗೆ ಲಘುವಾಗಿ ಮಾತನಾಡಲು ಹೋಗಬಾರದು. ಅವರು ರಾಷ್ಟ್ರಕವಿ. ಪಠ್ಯ ಪರಿಷ್ಕರಣೆ ಮಾಡಲು ವಿಷಯ ತಜ್ಞರ ಸಮಿತಿ ಮಾಡಬೇಕು, ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಯಾರ ಪಠ್ಯ ಇರಬೇಕು, ಯಾರ ಪಠ್ಯ ಇರಬಾರದು ಅವರು ನಿರ್ಧಾರ ಮಾಡಲಿ. ರೋಹಿತ್ ಚಕ್ರತೀರ್ಥ ಆರ್ ಎಸ್ ಎಸ್ ನವರು, ಅವರ ಬದಲು ಯಾವುದೇ ಪಕ್ಷ, ಸಂಘಟನೆಗೆ ಸೇರದ ವಿಷಯ ತಜ್ಞರನ್ನು ಅಧ್ಯಕ್ಷರಾಗಿ ಮಾಡಿ. ಭಗತ್ ಸಿಂಗ್, ಮಹಾತ್ಮ ಗಾಂಧಿ, ಅಂಬೇಡ್ಕರ್, ನಾರಾಯಣ ಗುರುಗಳ ವಿಚಾರಗಳನ್ನು ಓದುವುದರಿಂದ ದೇಶಭಕ್ತಿ, ಸಹಿಷ್ಣುತೆ, ಸೌಹಾರ್ದತೆಯ ಮೌಲ್ಯಗಳು ಉದ್ದೀಪನವಾಗುತ್ತದೆ. ಬುದ್ಧ, ಬಸವಣ್ಣ, ಕನಕದಾಸರು ಇವರೆಲ್ಲ ಸಮಾಜ ಸುಧಾರಕರು, ಇಂಥವರ ಬಗ್ಗೆ ಮಕ್ಕಳಿಗೆ ಹೇಳಿ. ಮಕ್ಕಳ ಜ್ಞಾನ ವಿಕಾಸವಾಗಬೇಕೋ? ಸಂಕುಚಿತವಾಗಬೇಕೋ? ವೈಚಾರಿಕತೆ ಬೆಳೆಸಿಕೊಳ್ಳಬೇಕೋ? ಬೇಡವೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


ನಾನು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಯಾವೆಲ್ಲ ಜಾತಿಗಳ ಪರಿಸ್ಥಿತಿ ಹೇಗಿದೆ ಮತ್ತು ಯಾರಿಗೆ ಅವಕಾಶ ನೀಡಬೇಕು, ಚುನಾವಣೆ ದೃಷ್ಟಿಯಿಂದ ಯಾರಿಗೆ ಅವಕಾಶ ನೀಡಬೇಕು, ಎರಡೇ ಸ್ಥಾನಗಳು ಇರುವುದರಿಂದ ಯಾರಿಗೆ ಕೊಡಬೇಕು ಎಂಬುದನ್ನು ಯೋಚನೆ ಮಾಡಿ ಹೈಕಮಾಂಡ್ ಗೆ ಹೇಳಿ ಬಂದಿದ್ದೀವಿ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಿ ಸಂಜೆ ಒಳಗೆ ಪಟ್ಟಿ ಬಿಡುಗಡೆ ಮಾಡುತ್ತದೆ. ಪಠ್ಯಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗಬೇಕು, ಹೀಗಾಗಿ ಯಾವುದೇ ಧರ್ಮದ ವಿಚಾರಗಳನ್ನು ತುರುಕಬಾರದು. ನಮ್ಮದು ಜಾತ್ಯತೀತ ರಾಷ್ಟ್ರ. ಮಕ್ಕಳಲ್ಲಿ ಇದೇ ಭಾವನೆ ಬೆಳೆಸುವ ಕೆಲಸ ಮಾಡಬೇಕು. ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು. ಹೆತ್ತವರಿಗೆ ಹೆಗ್ಗಣ ಮುದ್ದು ರೀತಿ ಶಿಕ್ಷಣ ಸಚಿವರಿಗೆ ಹೆಡ್ಗೆವಾರ್ ವಿಷಯ ಪಠ್ಯಕ್ಕೆ ಸೇರಿದರೆ ಯಾವ ಸಮಸ್ಯೆ ಇಲ್ಲ. ನಾಗೇಶ್ ಆರ್.ಎಸ್.ಎಸ್ ನವರು, ಹೆಡ್ಗೇವಾರ್ ಆರ್.ಎಸ್.ಎಸ್ ಸಂಸ್ಥಾಪಕರು. ನಾಳೆ ಗೋಡ್ಸೆಯನ್ನು ಪಠ್ಯದಲ್ಲಿ ಸೇರಿಸಬೇಕು ಅಂದ್ರೆ? ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವವರು, ದೇಶಪ್ರೇಮ ಇರುವವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿ, ನಾವು ಬೇಡ ಹೇಳಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version