ನವದೆಹಲಿ: ಇನ್ನು ಮುಂದೆ ಧ್ವನಿ ಮತ್ತು ವೀಡಿಯೊ ಕರೆ ಮಾಡುವಾಗ ಏಕಕಾಲದಲ್ಲಿ 32 ಜನರ ಜೊತೆ ಸಂಪರ್ಕ ಸಾಧಿಸಲು, ಒಂದೇ ಬಾರಿಗೆ 2 ಜಿ.ಬಿ. ವರೆಗಿನ ಫೈಲ್ ಗಳನ್ನು ವರ್ಗಾಯಿಸಲು ಹಾಗೂ ಗುಂಪಿನಲ್ಲಿ ಇನ್ನು ಮುಂದೆ ಗರಿಷ್ಠ 1,024 ಜನರನ್ನು ಸೇರಿಸಿಕೊಳ್ಳಲು ವಾಟ್ಸ್ಆ್ಯಪ್ ಅವಕಾಶ ಕಲ್ಪಿಸಲಿದೆ
ವಾಟ್ಸ್ಆ್ಯಪ್ ನಲ್ಲಿ ನಾವು ಇಂದು ‘ಕಮ್ಯುನಿಟೀಸ್’ಗೆ ಚಾಲನೆ ನೀಡುತ್ತಿದ್ದೇವೆ. ಇದರ ಮೂಲಕ ಗ್ರೂಪ್ ಗಳು ಇನ್ನಷ್ಟು ಉತ್ತಮವಾಗುತ್ತವೆ. ಪೋಲ್ ಹಾಗೂ ಒಂದೇ ಬಾರಿಗೆ 32 ಜನರಿಗೆ ವಿಡಿಯೊ ಕರೆ ಮಾಡುವ ಸೌಲಭ್ಯವನ್ನು ಕೂಡ ನಾವು ಆರಂಭಿಸುತ್ತಿದ್ದೇವೆ. ಇದು ಎಂಡ್-ಟು-ಎಂಡ್ ಗೂಢಲಿಪೀಕರಣದಿಂದ ಸುರಕ್ಷಿತವಾಗಿರುತ್ತದೆ. ಆದ್ದರಿಂದ ನಿಮ್ಮ ಸಂದೇಶಗಳು ಖಾಸಗಿಯಾಗಿ ಉಳಿಯುತ್ತವೆ ಎಂದು ವಾಟ್ಸ್ಆ್ಯಪ್ ನ ಮಾಲೀಕತ್ವ ಹೊಂದಿರುವ ಮೆಟಾ ಕಂಪನಿಯ ಸಂಸ್ಥಾಪಕ ಮಾರ್ಕ್ ಝಕರ್ ಬರ್ಗ್ ಹೇಳಿದ್ದಾರೆ.
ಈ ಸೌಲಭ್ಯ ಪಡೆಯಲು ವಾಟ್ಸ್ಆ್ಯಪ್ ಸಾಫ್ಟ್ ವೇರ್ ಅಪ್ ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ವಾಟ್ಸ್ಆ್ಯಪ್ ಗ್ರೂಪ್ ಗಳನ್ನು ಹೆಚ್ಚು ಉಪಯುಕ್ತಗೊಳಿಸುವ ನಿಟ್ಟಿನಲ್ಲಿ 15 ದೇಶಗಳ 50ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಮೆಟಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸೌಲಭ್ಯಗಳು ಆರಂಭವಾಗುವ ಕುರಿತು ಕಂಪನಿಯು ಎಪ್ರಿಲ್ ನಲ್ಲಿ ಘೋಷಣೆ ಮಾಡಿತ್ತು. ಈಗ ಅವುಗಳನ್ನು ಆರಂಭಿಸುತ್ತಿದೆ. ಇವು ಮುಂದಿನ ಕೆಲವು ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗಲಿವೆ.
ವಾಟ್ಸ್ಆ್ಯಪ್ ಮೂಲಕ ಧ್ವನಿ ಮತ್ತು ವಿಡಿಯೊ ಕರೆ ಮಾಡುವಾಗ ಇನ್ನು ಮುಂದೆ ಏಕಕಾಲದಲ್ಲಿ 32 ಜನರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ. ಅಲ್ಲದೆ, ಒಂದೇ ಬಾರಿಗೆ ಗರಿಷ್ಠ 2 ಜಿ.ಬಿ.ವರೆಗಿನ ಕಡತಗಳನ್ನು ಕಳುಹಿಸಲಿಕ್ಕೂ ವಾಟ್ಸ್ಆ್ಯಪ್ ಅವಕಾಶ ಕಲ್ಪಿಸಲಿದೆ. ವಾಟ್ಸ್ಆ್ಯಪ್ ಗುಂಪಿನಲ್ಲಿ ಇನ್ನು ಮುಂದೆ ಗರಿಷ್ಠ 1,024 ಜನರನ್ನು ಸೇರಿಸಿಕೊಳ್ಳಲು ಆಗಲಿದೆ ಎಂದು ಕಂಪನಿ ಗುರುವಾರ ತಿಳಿಸಿದೆ. ಇದರ ಜತೆಗೆ ಎಮೊಜಿ ರಿಯಾಕ್ಷನ್, ದೊಡ್ಡ ಫೈಲ್ ಶೇರ್ ಮಾಡುವುದು ಮತ್ತು ಸಂದೇಶ ಅಥವಾ ಪೋಟೋ, ವಿಡಿಯೊ ಅನ್ನು ಗ್ರೂಪ್ ಅಡ್ಮಿನ್ ಡಿಲೀಟ್ ಮಾಡಬಹುದಾದ ಸೌಲಭ್ಯ ಮುಂದುವರಿಯಲಿದೆ.
ಗರಿಷ್ಠ ಐದು ಸಾವಿರ ಜನರಿಗೆ ಸಂದೇಶಗಳನ್ನು ಬ್ರಾಡ್ಕಾಸ್ಟ್ ಮಾಡಲು ಸಾಧ್ಯವಾಗಲಿದೆ. ವಾಟ್ಸ್ಆ್ಯಪ್ ಮೂಲಕ ಅಭಿಪ್ರಾಯ ಸಂಗ್ರಹ (ಪೋಲ್) ನಡೆಸಲು ಅವಕಾಶ ಸಿಗಲಿದೆ.