Home ಟಾಪ್ ಸುದ್ದಿಗಳು ಏನಿದು ವೈಯಕ್ತಿಕ ಮಾಹಿತಿ ಕದಿಯುವ ವಾಟ್ಸಪ್ OTP ವಂಚನೆ? | ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸಬಹುದು?...

ಏನಿದು ವೈಯಕ್ತಿಕ ಮಾಹಿತಿ ಕದಿಯುವ ವಾಟ್ಸಪ್ OTP ವಂಚನೆ? | ನಿಮ್ಮ ಖಾತೆಯನ್ನು ಹೇಗೆ ಸುರಕ್ಷಿತವಾಗಿರಿಸಬಹುದು? ; ಇಲ್ಲಿದೆ ಮಾಹಿತಿ

ನವದೆಹಲಿ : ವಾಟ್ಸಪ್ ಬಗ್ಗೆ ಕೇಳದವರೇ ಇಲ್ಲ. ಜಗತ್ತಿನಾದ್ಯಂತ ಕೋಟ್ಯಂತರ ಜನರು ತಮ್ಮ ಮೊಬೈಲ್ ಫೋನ್ ಗಳಲ್ಲಿ ವಾಟ್ಸಪ್ ಅನ್ನು ಬಳಸುತ್ತಿದ್ದಾರೆ. ಕೋವಿಡ್ 19 ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ನೇಹಿತರು, ಸಂಬಂಧಿಗಳ ಜೊತೆ ನಿಕಟ ಹಾಗೂ ಸುಲಭ ಸಂಪರ್ಕ ಸಾಧಿಸಲು ವೇದಿಕೆಯಾದ ವಾಟ್ಸಪ್ ಬಳಕೆದಾರರ ಸಂಖ್ಯೆ ಹಲವು ಪಟ್ಟು ಹೆಚ್ಚಿದೆಯಂತೆ. ಇದನ್ನೇ ದುರ್ಲಾಭಕ್ಕೆ ಬಳಸಿಕೊಳ್ಳಲು ನೋಡಿದ ಗುಂಪೊಂದು ಹೊಸ ವಂಚನೆ ಜಾಲವೊಂದನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಒಟಿಪಿ ಒಂದನ್ನು ಬಳಸಿಕೊಂಡು ನಿಮ್ಮ ವಾಟ್ಸಪ್ ಖಾತೆಗೆ ಕನ್ನ ಹಾಕಲು ಕೆಲವು ವಂಚಕರು ಯತ್ನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸೂಕ್ಷ್ಮ ದತ್ತಾಂಶಗಳನ್ನು ಸಂಗ್ರಹಿಸಲು ವಂಚಕರು ಹಿಂದೆ ಬಳಸುತ್ತಿದ್ದ ಹಳೆಯ ಟ್ರಿಕ್ ಇದಾಗಿದ್ದರೂ, ಇದರ ಅರಿವಿಲ್ಲದ ವಾಟ್ಸಪ್ ಬಳಕೆದಾರರು ವಂಚನೆಗೆ ಗುರಿಯಾಗುವುದು ಬಹುತೇಕ ಖಚಿತ.

ಈ ವಂಚನಾ ಜಾಲದ ಪ್ರಕಾರ, ಅಪರಿಚಿತ ಸಂಖ್ಯೆಯೊಂದರಿಂದ ನಿಮಗೆ ಸಂದೇಶವೊಂದು ಬರುತ್ತದೆ. ಅನಿರೀಕ್ಷಿತ ತಪ್ಪಾಗಿ ನಿಮ್ಮ ಸಂಖ್ಯೆಗೆ ಒಟಿಪಿಯೊಂದು ಬಂದಿದೆ ಅದನ್ನು ತಾವು ತಿಳಿಸಿದ ನಂಬಗ್ ಗೆ ವರ್ಗಾಯಿಸಿ ಎಂಬ ಮಾಹಿತಿ ಆ ಸಂದೇಶದಲ್ಲಿರುತ್ತದೆ.

ಈ ಸಂದೇಶ ಸತ್ಯವೆಂದು ಭಾವಿಸಿ ನೀವು ಸಂದೇಶ ಕಳುಹಿಸಿದವರು ತಿಳಿಸಿದ ಸಂಖ್ಯೆಗೆ ಒಟಿಪಿ ಕಳುಹಿಸಿದರೆ, ಆಗ ನಿಮ್ಮ ವಾಟ್ಸಪ್ ಖಾತೆಗೆ ಕನ್ನ ಹಾಕಲು ಸಾಧ್ಯವಾಗುತ್ತದೆ. ಆ ಮೂಲಕ ಹ್ಯಾಕರ್ ನಿಮ್ಮ ವಾಟ್ಸಪ್ ಖಾತೆ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾನೆ ಮತ್ತು ಚಾಟ್ ಮತ್ತು ಖಾಸಗಿ ಮಾಹಿತಿಯನ್ನು ಕಲೆಹಾಕಿಕೊಳ್ಳುತ್ತಾನೆ.

ಇಂತಹ ವಂಚನೆಯಿಂದ ತಪ್ಪಿಸಿಕೊಳ್ಳಲು ನೀವು ಈ ಕೆಳಗಿನ ಕೆಲಸಗಳನ್ನು ಮಾಡಿ :

  1. ವಾಟ್ಸಪ್ ಓಪನ್ ಮಾಡಿದ ಮೇಲೆ, ನಿಮ್ಮ ಖಾತೆಯ ಮೇಲೆ ಬಲಭಾಗದಲ್ಲಿರುವ ಮೂರು ಚುಕ್ಕೆ(ಡಾಟ್)ಗಳ ಮೇಲೆ ಕ್ಲಿಕ್ ಮಾಡಿ.
  2. ಬಳಿಕ ಸೆಟ್ಟಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಅಕೌಂಟ್ ಆಪ್ಷನ್ ಆಯ್ಕೆ ಮಾಡಿ
  3. ಅದರಲ್ಲಿ ಟು ಸ್ಟೆಪ್ ವೆರಿಫಿಕೇಶನ್ ಗೆ ಕ್ಲಿಕ್ ಮಾಡಿ, ಆಗ ಬರುವ ಎನೇಬಲ್ ಆಪ್ಷನ್ ಗೆ ಕ್ಲಿಕ್ ಮಾಡಿ
  4. ಎನೇಬಲ್ ಕ್ಲಿಕ್ ಮಾಡಿದ ಮೇಲೆ, ವಾಟ್ಸಪ್ ನಿಮಗೆ ಕಳುಹಿಸುವ ಆರು ಸಂಖ್ಯೆಗಳನ್ನು ಅದರಲ್ಲಿ ನಮೂದಿಸಿ.
  5. ಎರಡು ಬಾರಿ ಆ ಡಿಜಿಟ್ ನಮೂದಿಸುವಂತೆ ವಾಟ್ಸಪ್ ಕೇಳುತ್ತದೆ. ನಂತರ ನಿಮ್ಮ –ಮೇಲ್ ವಿಳಾಸ ಕೇಳುತ್ತದೆ.
  6. ನಿಮ್ಮ ಇ-ಮೇಲ್ ವಿಳಾಸದಲ್ಲಿ ಅದನ್ನು ದೃಢಪಡಿಸಿದ ಬಳಿಕ, ನಿಮ್ಮ ಎರಡು ಹಂತದ (ಟು ಸ್ಟೆಪ್) ವೆರಿಫಿಕೇಶನ್ ಸಕ್ರಿಯಗೊಳ್ಳುತ್ತದೆ.
  7. ಅಗತ್ಯಬಿದ್ದರೆ ನೀವು ಅದನ್ನು ಡಿಸೇಬಲ್ ಮಾಡಬಹುದು ಅಥವಾ ಯಾವುದೇ ಸಂದರ್ಭ ಪಿನ್ ಕೂಡ ಬದಲಾಯಿಸಬಹುದು. ಇದೇ ಪ್ರಕ್ರಿಯೆಗಳನ್ನು ಪಾಲಿಸಿದರೆ ಸಾಕು.

ಟು ಸ್ಟೆಪ್ ವೆರಿಫಿಕೇಶನ್ ಮಾಡಿದ ಬಳಿಕ, ವಾಟ್ಸಪ್ ಪ್ರತಿ ಬಾರಿ ಭದ್ರತಾ ಕಾರಣಗಳಿಗಾಗಿ ನಿಮ್ಮ ಪಾಸ್ ವರ್ಡ್ ಕೇಳುತ್ತದೆ.

Join Whatsapp
Exit mobile version