ಹೊಸದಿಲ್ಲಿ: ಸುಮಾರು ನಾಲ್ಕು ಗಂಟೆಗಳ ಮಾತುಕತೆಯ ಬಳಿಕವೂ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಕೃಷಿ ಕಾನೂನುಗಳನ್ನು ಹಿಂಪಡೆಯುವ ಕುರಿತ ಕಗ್ಗಂಟು ಇನ್ನೂ ಮುಂದುವರಿದಿದೆ. ಏಳನೆಯ ಸುತ್ತಿನ ಮಾತುಕತೆಯಲ್ಲೂ ಈ ಕುರಿತು ಯಾವುದೇ ಪರಿಹಾರವುಂಟಾಗಿಲ್ಲ.
ಮೂಲಗಳ ಪ್ರಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನೀಕರಿಸುವ ರೈತ್ರ ಬೇಡಿಕೆಯನ್ನು ಚರ್ಚಿಸುವುದಕ್ಕಾಗಿ ಸರಕಾರ ಪ್ರಸ್ತಾಪವಿಟ್ಟಿತ್ತು. ಆದರೆ ರೈತ ಒಕ್ಕೂಟದ ನಾಯಕರು ಕೃಷಿ ಕಾನೂನುಗಳನ್ನು ಹಿಂಪಡೆಯುವುದರ ಕುರಿತು ಚರ್ಚಿಸುವುದರಲ್ಲೇ ದೃಢವಾಗಿ ನಿಂತರು. ಎರಡೂ ಪಕ್ಷಗಳು ಜನವರಿ 8ರಂದು ಮತ್ತೆ ಸಭೆ ಸೇರುವುದಕ್ಕೆ ಒಪ್ಪಿಕೊಂಡಿವೆ.
ಬೇಡಿಕೆ ಈಡೇರದಿದ್ದರೆ ಜನವರಿ 26ರ ಗಣರಾಜ್ಯ ದಿನದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ.
ಕೃಷಿ ಸಚಿವ ನರೇಂದ್ರ ಥೋಮರ್, ಕಾನೂನುಗಳು ರೈತರಿಗೆ ಪ್ರಯೋಜನಕಾರಿ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ ಎಂದು ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿಯ ಭಾಗವಾಗಿದ್ದ ಸರ್ವನ್ ಪಂಧೇರ್ ಹೇಳಿದ್ದಾರೆ.
“ಕಾನೂನನ್ನು ಸಂಸತ್ತಿನ ಮೂಲಕ ತರಲಾಗಿದೆ. ಸರಕಾರ ಕಾನೂನುಗಳನ್ನು ತಿದ್ದಲು ಮತ್ತು ರೈತರ ಸಲಹೆಗಳನ್ನು ಸಂಯೋಜಿಸಲು ಸಿದ್ಧವಾಗಿದೆ ಎಂದು ಥೋಮರ್ ಹೇಳಿದ್ದಾರೆ” ಎಂದು ಸರ್ವನ್ ತಿಳಿಸಿದರು.