Home ಕರಾವಳಿ ಮಂಗಳೂರಿನಲ್ಲಿ ನಡೆಯುತ್ತಿರುವುದು ನೈತಿಕ ಪೊಲೀಸ್ ಗಿರಿಯಲ್ಲ, ಅನೈತಿಕ ಗೂಂಡಾಗಿರಿ: ಯು.ಟಿ. ಖಾದರ್

ಮಂಗಳೂರಿನಲ್ಲಿ ನಡೆಯುತ್ತಿರುವುದು ನೈತಿಕ ಪೊಲೀಸ್ ಗಿರಿಯಲ್ಲ, ಅನೈತಿಕ ಗೂಂಡಾಗಿರಿ: ಯು.ಟಿ. ಖಾದರ್

ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವುದು ನೈತಿಕ ಪೊಲೀಸ್’ಗಿರಿಯಲ್ಲ, ಅದು ಅನೈತಿಕ ಗೂಂಡಾಗಿರಿ ಎಂದು ವಿರೋಧ ಪಕ್ಷ ಉಪನಾಯಕ ಯುಟಿ ಖಾದರ್ ಕಿಡಿಕಾರಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, ನಗರದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ಎಂಬ ಹೆಸರಿನಲ್ಲಿ ಪುಂಡಾಟಿಕೆ ಹೆಚ್ಚಾಗಿವೆ. ಈ ಕುರಿತು ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವರೊಂದಿಗೆ ಮಾತನಾಡಿ ಈ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇನೆ ಎಂದರು.

ಇವರು ನಡೆಸುತ್ತಿರುವುದು ನೈತಿಕ ಪೊಲೀಸ್ ಗಿರಿಯಲ್ಲ ಬದಲಾಗಿ ಅನೈತಿಕ ಗೂಂಡಾಗಿರಿ ಎಂದು ಹೇಳಿದ ಅವರು, ಸರಕಾರ ಇಂತಹ ಗೂಂಡಾಗಳು ಮತ್ತು ಕೋಮುವಾದಿಗಳ ಕೈಗೆ ಆಡಳಿತವನ್ನು ಕೊಟ್ಟು ಮೌನವಾಗಿದೆ ಎಂದು ಟೀಕಿಸಿದರು.

ಸದ್ಯ ರಾಜ್ಯದಲ್ಲಿ ಯಾವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ನಿರ್ಧರಿಸುವವರು ಇಂತಹ ಗೂಂಡಾಗಳು. ಆದ್ದರಿಂದ ಪೊಲೀಸ್ ಇಲಾಖೆಗೆ ಇವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಅಧಿಕಾರಿಗಳ ಕೈಗಳನ್ನು ಕಟ್ಟಿಹಾಕಿದೆ ಎಂದು ಆರೋಪಿಸಿದರು.

ಇಲ್ಲಿನ ಸರ್ಕಾರಕ್ಕೆ ರೌಡಿಗಳನ್ನು ಮತ್ತು ಗೂಂಡಾಗಳನ್ನು ಮಟ್ಟ ಹಾಕಲು ಆಸಕ್ತಿ ಇಲ್ಲ ಅಂದಮೇಲೆ ಈ ಅಧಿಕಾರಿಗಳು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ ಖಾದರ್, ಇಂತಹ ಕೃತ್ಯ ಮಾಡುವುದು ಯಾರೆಂದು ಪೊಲೀಸರಿಗೂ ಗೊತ್ತು. ಆದರೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಪೊಲೀಸರಿಗೆ ಒತ್ತಡ ಹಾಕಿ ಕ್ರಮ ಕೈಗೊಳ್ಳದಂತೆ ಆದೇಶಿಸುತ್ತಿದೆ, ಇದರಿಂದ ಜನರಿಗೆ ಇಲಾಖೆ ಮೇಲೆ ಸಂಪೂರ್ಣ ನಂಬಿಕೆ ಹೋಗುವಂತಾಗಿದೆ. ಸಮಾಜಕ್ಕೆ ನಯಾಪೈಸೆಯ ಉಪಕಾರವಿಲ್ಲದವರು ಇಂತಹ ಗೂಂಡಾಗಿರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಪೊಲೀಸರಿಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಒತ್ತಿ ಹೇಳಿದರು.

ನಗರದ ಜನಪ್ರತಿನಿಧಿಗಳು ಸರಿಯಿದ್ದರೆ ಪೊಲೀಸರಿಗೆ ತಮ್ಮತಮ್ಮ ಕೆಲಸ ಮಾಡಲು ಸುಲಭವಾಗುತ್ತದೆ. ಆದರೆ ಇಲ್ಲಿ ಜನಪ್ರತಿನಿಧಿಗಳೇ ಇಂತಹ ಗೂಂಡಾಗಳಿಗೆ ಕುಮ್ಮಕ್ಕು ನೀಡಿ ಗಲಭೆ ಎಬ್ಬಿಸುತ್ತಿದ್ದಾರೆ ಎಂದು ಖಾದರ್ ಯಾರ ಹೆಸರು ಪ್ರಸ್ತಾಪಿಸದೆ ಆರೋಪಿಸಿದರು.

Join Whatsapp
Exit mobile version