Home ಟಾಪ್ ಸುದ್ದಿಗಳು ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ: ಎಚ್.ಡಿ. ಕುಮಾರಸ್ವಾಮಿ ಕಿಡಿ

ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ: ಎಚ್.ಡಿ. ಕುಮಾರಸ್ವಾಮಿ ಕಿಡಿ

ಬೆಂಗಳೂರು: ಆಗಸ್ಟ್ 1ರಿಂದ ನಂದಿನಿ ಹಾಲಿನ ದರ ಲೀಟರ್ ಒಂದಕ್ಕೆ 3 ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಇದನ್ನು ಖಂಡಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ ಎಂದು ಆರೋಪಿಸಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಆಲ್ಕೋಹಾಲಿನ ಬೆಲೆ ಏರಿಸಿದ ನಂತರ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆಯನ್ನೂ ಲೀಟರಿಗೆ ₹3 ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುತ್ತಿದೆ! ಸ್ವತಃ ತಾವೇ ಕಿವಿಯಲ್ಲಿ ಹೂವಿಟ್ಟುಕೊಂಡಿದ್ದ ಕಾಂಗ್ರೆಸ್ಸಿಗರು, ಜನರ ತಲೆಯ ಮೇಲೆ ಫ್ಲವರ್ ಪಾಟ್ ಇಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.


ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿ ಬಾಯಿ ಬಡಿದುಕೊಂಡಿತ್ತು. ದೊಡ್ಡ ಬಾನಗಡಿಯನ್ನೇ ಎಬ್ಬಿಸಿತ್ತು. ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಹೀಗಿದೆ ನೋಡಿ ಕೈ ಕರಾಮತ್ತು. ಅನ್ನಭಾಗ್ಯದ ಹಣವನ್ನು ಹಾಲು, ಆಲ್ಕೋಹಾಲಿನಿಂದಲೇ ವಸೂಲಿಗೆ ಇಳಿದಿರುವ ಕಾಂಗ್ರೆಸ್ ಕ್ಷುದ್ರ ವಿತ್ತ ನೀತಿಗೆ ಧಿಕ್ಕಾರ ಎಂದು ಹೇಳಿದ್ದಾರೆ.


ಆರಂಭದಲ್ಲಿಯೇ ವಿದ್ಯುತ್ ಶಾಕ್ ಕೊಟ್ಟಿದ್ದ ಸರ್ಕಾರ, ಗೃಹಜ್ಯೋತಿಯನ್ನು ಜನರ ಪಾಲಿಗೆ ಸುಡುಜ್ಯೋತಿ ಮಾಡಿತ್ತು. ಏರಿದ ಬೆಲೆಗಳನ್ನು ಕೆಳಗಿಳಿಸಲು ಕೈಲಾಗದ ಈ ಸರ್ಕಾರ, ವಿಧಾನ ಕಲಾಪ ಮುಗಿಯುತ್ತಿದ್ದಂತೆಯೇ ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆಭಾಗ್ಯವನ್ನು ಕರುಣಿಸಿ ಕೈತೊಳೆದುಕೊಂಡಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿದ್ದವರು ಎರಡೇ ತಿಂಗಳಲ್ಲಿ ಅದನ್ನು ಮರೆತೇ ಹೋಗಿದ್ದಾರೆ!! ಹಸುಗಳ ಹಿಂಡಿ, ಬೂಸಾ ಬೆಲೆ ಇಳಿಕೆಗೂ ಯಾವ ಗ್ಯಾರಂಟಿಯೂ ಇಲ್ಲ. ಇವರಿಗೆ ಆಲ್ಕೋಹಾಲಾದರೇನು? ಹಾಲಾದರೇನು? ಖಜಾನೆ ತುಂಬಬೇಕಷ್ಟೇ. ಈಗ ಜನರ ಬದುಕೇ ಹಾಲಾಹಲವಾಗಿದೆ ಎಂದು ಹೇಳಿದ್ದಾರೆ.

Join Whatsapp
Exit mobile version