ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಬೆನ್ನಲ್ಲೇ ಸಂಸತ್ತಿನಲ್ಲಿ ಗುಲಾಂ ನಬಿ ಆಜಾದ್ ಅವರನ್ನು ಪ್ರಧಾನಿ ಇದೇ ರೀತಿ ಹೊಗಳಿದ್ದರು. ಅದರ ನಂತರ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪೈಲಟ್, ಪ್ರಧಾನಿ ನರೇಂದ್ರ ಮೋದಿ ಅವರು ಮಂಘರ್ ಧಾಮ್ ಗೆ ಭೇಟಿ ನೀಡಿದಾಗ ತಮ್ಮ ರಾಜಕೀಯ ವಿರೋಧಿ ಅಶೋಕ್ ಗೆಹ್ಲೋಟ್ ಅವರನ್ನು ಹೊಗಳಿರುವುದು ಗಂಭೀರ ವಿಷಯ ಮತ್ತು ಇದೊಂದು ಕುತೂಹಲಕಾರಿ ಬೆಳವಣಿಗೆ. ಈ ಹಿಂದೆ ರಾಜ್ಯಸಭೆಯ ಮಾಜಿ ಸಂಸದ ಗುಲಾಂ ನಬಿ ಆಜಾದ್ ಅವರ ವಿದಾಯ ದಿನದಂದು ಪ್ರಧಾನಿ ಅವರನ್ನು ಹೊಗಳಿದ್ದರು. ಬಳಿಕ ಆಜಾದ್ ಅವರು ಪಕ್ಷ ತೊರೆದಿದ್ದು, ಗೆಹ್ಲೋಟ್ ಕೂಡಾ ಅದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.