Home ಟಾಪ್ ಸುದ್ದಿಗಳು ಉಮ್ರಾ ನಿರ್ವಹಿಸಲು ಭಾರತೀಯರು ಕೈಗೊಳ್ಳಬೇಕಾದ ಕ್ರಮಗಳೇನು ? ಇಲ್ಲಿದೆ ಸಂಪೂರ್ಣ ಮಾಹಿತಿ

ಉಮ್ರಾ ನಿರ್ವಹಿಸಲು ಭಾರತೀಯರು ಕೈಗೊಳ್ಳಬೇಕಾದ ಕ್ರಮಗಳೇನು ? ಇಲ್ಲಿದೆ ಸಂಪೂರ್ಣ ಮಾಹಿತಿ

ರಿಯಾದ್ ಜುಲೈ 27 : ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಪ್ರವೇಶ ನಿಷೇಧದ ಅದೇಶವನ್ನು ಪರಿಷ್ಕರಿಸಿದೆ. ಒಂಬತ್ತು ದೇಶಗಳಿಂದ ಪವಿತ್ರ ಉಮ್ರಾ ನಿರ್ವಹಿಸಲು ಮೂರನೇ ದೇಶದಲ್ಲಿ ಎರಡು ವಾರಗಳನ್ನು ಕಳೆದ ನಂತರ ಸೌದಿ ಅರೇಬಿಯಾ ಪ್ರವೇಶಿಸಬಹುದೆಂದು ಭಾನುವಾರ ಸೌದಿ ಸರ್ಕಾರವು ಸುದ್ದಿಸಂಸ್ಥೆಗಳ ಮೂಲಕ ಸ್ಪಷ್ಟಪಡಿಸಿದೆ.

ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಈಜಿಪ್ಟ್, ಟರ್ಕಿ, ಅರ್ಜೆಂಟೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಮತ್ತು ಲೆಬನಾನ್ ಎಂಬ ಒಂಬತ್ತು ದೇಶಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ದೇಶಗಳಿಗೆ ನೇರ ವಿಮಾನಗಳನ್ನು ಕಳುಹಿಸಲು ಸೌದಿ ಅನುಮತಿ ನೀಡಿದೆ. ಈ ಮೇಲಿನ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸುವವರು ಮೂರನೇ ರಾಷ್ಟ್ರದಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರೈಂಟೈನ್ ಗೆ ಒಳಪಡಬೇಕು.

ಈ ವರ್ಷದ ಯಶಸ್ವಿ ಹಜ್ಜ್ ಅನ್ನು ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಮೊಹರಂ 1 ಅಂದರೆ ಆಗಸ್ಟ್ 10 2021 ರಿಂದ ವಿಶ್ವದಾದ್ಯಂತ ಯಾತ್ರಾರ್ಥಿಗಳಿಗೆ ಉಮ್ರಾ ಸೇವೆಯನ್ನು ಪುನರಾರಂಭಿಸುವುದಾಗಿ ಸೌದಿ ಅರೇಬಿಯಾ ಜುಲೈ 25 ರಂದು ಪ್ರಕಟಿಸಿದೆ. ಜುಲೈ 25 ರಿಂದ ಉಮ್ರಾ ಏಜೆನ್ಸಿಗಳು ಆಗಸ್ಟ್ 10 ರಿಂದ ಉಮ್ರಾ ವೀಸಾವನ್ನು ನೀಡಲು ಅವಕಾಶವಿದೆ. ಯಾತ್ರಾರ್ಥಿಗಳನ್ನು ಸ್ವೀಕರಿಸಲು ಗ್ರ್ಯಾಂಡ್ ಮಸೀದಿಗಳು ಸಿದ್ದವಾಗಿದೆಯೆಂದು ಮಸೀದಿ ವ್ಯವಹಾರ ಉಪ ಮುಖ್ಯಸ್ಥ ಮುಹಮ್ಮದ್ ಅಲ್- ಮುಹೈಮಿದ್ ತಿಳಿಸಿದ್ದಾರೆ.

ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಲಸಿಕೆ ಹಾಕಿದ ವಿದೇಶಿ ಉಮ್ರಾ ಯಾತ್ರಿಕರನ್ನು ಸ್ವೀಕರಿಸಲು 500 ಕ್ಕೂ ಮಿಕ್ಕಿದ ಸಂಸ್ಥೆ ಮತ್ತು 6000 ವಿದೇಶಿ ಉಮ್ರಾ ಏಜೆಂಟರನ್ನು ಸಿದ್ದಪಡಿಸಲಾಗಿದೆ. ಯಾತ್ರಾರ್ಥಿಗಳು 30 ವೆಬ್‌ಸೈಟ್‌ಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಮ್ಮ ಉಮ್ರಾ ಪ್ಯಾಕೇಜ್‌ಗಳನ್ನು ಕಾಯ್ದಿರಿಸಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತರು ಲಸಿಕೆ ಹಾಕಿಸಿಕೊಂಡು ಉಮ್ರಾ ಯಾತ್ರೆ ನಡೆಸಬಹುದೆಂದು ಹಜ್ ಮತ್ತು ಉಮ್ರಾ ರಾಷ್ಟ್ರೀಯ ಸಮಿತಿಯ ಸದಸ್ಯ ಹನಿ ಅಲಿ ಅಲ್ ಅಮಿರಿ ಉಲ್ಲೇಖಿಸಿದ್ದಾರೆ.

ಕೋವಿಡ್ ಆತಂಕದಿಂದಾಗಿ 2020 ರ ಫೆಬ್ರವರಿಯಲ್ಲಿ ಉಮ್ರಾವನ್ನು ಸ್ಥಗಿತಗೊಳಿಸಲಾಗಿತ್ತು. ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಈ ವರ್ಷದ ಸೌದಿ ಅರೇಬಿಯದಿಂದ ಹಜ್ಜ್ ನಿರ್ವಹಿಸಲು ಕೇವಲ 60,000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಿತ್ತು. ಮಾತ್ರವಲ್ಲದೇ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಮತ್ತು ಈ ವರ್ಷದ ಹಜ್ಜ್ ಯಶಸ್ವಿಯಾಗಿದೆಯೆಂದು ಸೌದಿ ಘೋಷಿಸಿದೆ.

Join Whatsapp
Exit mobile version