ಬೆಂಗಳೂರು : ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 2 ಗಂಟೆಯವರೆಗೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ನೀಡಿದ ಸಂತ್ರಸ್ತ ಯುವತಿಯನ್ನು ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ SIT ಅಧಿಕಾರಿಗಳು ಕರೆದೊಯ್ದಿದ್ದು, ಅಧಿಕಾರಿಗಳು ಯುವತಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸಂತ್ರಸ್ತ ಯುವತಿಗೆ ಎಸ್ ಐ ಟಿ ಅಧಿಕಾರಿಗಳ ಪ್ರಶ್ನೆ..?
1 ) ರಮೇಶ್ ಜಾರಕಿಹೊಳಿಯನ್ನು ಸಂಪರ್ಕಿಸಲು ಕಾರಣವೇನು?
2) ಅತ್ಯಾಚಾರ ಎನ್ನುವುದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾಕೆ?
3) ಜಾರಕಿಹೊಳಿ ವಿಡಿಯೋದಲ್ಲಿದ್ದ ಯುವತಿ ನಾನಲ್ಲ ಎನ್ನಲು ಕಾರಣವೇನು?
4) ಗೊಂದಲ ಮೂಡಿಸುವ ಹೇಳಿಕೆಗಳನ್ನು ನೀಡಲು ಕಾರಣವೇನು..? ಯಾವುದಾದರೂ ಒತ್ತಡಗಳಿತ್ತಾ?
5) ಬೆದರಿಕೆ ಇದೆ ಎಂದು ಹೇಳಿದ್ದೀರಿ..? ಯಾರಿಂದ ನಿಮಗೆ ಬೆದರಿಕೆಯಿದೆ..?
ವಿಚಾರಣೆ ವೇಳೆ ಸಿಡಿ ಲೇಡಿ ಎಸ್ ಐ ಟಿ ಅಧಿಕಾರಿಗಳ ಮುಂದೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ವಿಚಾರಣೆ ವೇಳೆ ಮಾತನಾಡಿದ ಯುವತಿ ನನ್ನನ್ನು ಯಾರೂ ಕೂಡ ಕಿಡ್ನಾಪ್ ಮಾಡಿರಲಿಲ್ಲ, ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ನನಗೆ ಬೆದರಿಕೆ ಒಡ್ಡಲಾಗಿದೆ. ರಮೇಶ್ ಜಾರಕಿಹೊಳಿಯಿಂದ ನನಗೆ ಬೆದರಿಕೆ ಇದ್ದ ಹಿನ್ನೆಲೆ ನಾನು ತಲೆಮರೆಸಿಕೊಂಡಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾಳೆ ಎನ್ನಲಾಗಿದೆ.
ನನ್ನ ತಂದೆ, ತಾಯಿ, ಸೋದರ ಕೂಡ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ, ನನ್ನ ತಂದೆ, ತಾಯಿ ಸೋದರನಿಗೂ ರಕ್ಷಣೆ ಕೊಡಬೇಕು ಎಂದು ಅಧಿಕಾರಿಗಳ ಬಳಿ ಸಂತ್ರಸ್ತೆ ಮನವಿ ಮಾಡಿದ್ದಾಳೆ. ಇನ್ನೂ, ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ತಮಗೆ ಕೊಟ್ಟ ಗಿಫ್ಟ್, ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ, ಚಾಟಿಂಗ್, ವಿಡಿಯೋ ಮೊಬೈಲ್ ಸಂದೇಶಗಳನ್ನು SIT ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
ವೈದ್ಯಕೀಯ ಪರೀಕ್ಷೆ ನಡೆಸುವವರೆಗೂ ನೀವು ನಮ್ಮ ರಕ್ಷಣೆಯಲ್ಲಿರಬೇಕು, ನಿಮ್ಮ ರಕ್ಷಣೆಗೆ 8 ಮಹಿಳಾ ಪೊಲೀಸರ ತಂಡ ನಿಯೋಜನೆ ಮಾಡಲಾಗಿದೆ. ನಿಮಗೆ ರಕ್ಷಣೆ ನೀಡಲಿದ್ದೇವೆ. ನೀವು ಬಯಸಿದ್ರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿರಬಹುದು ಎಂದು SIT ಅಧಿಕಾರಿಗಳು ಯುವತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ SIT ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.