ಅಣ್ಣಾಮಲೈ ಏನು ದೊಡ್ಡ ಹೀರೋನಾ?: ರೇಣುಕಾಚಾರ್ಯ ತೀವ್ರ ವಾಗ್ದಾಳಿ

Prasthutha|

ಬೆಂಗಳೂರು: ಬಿಜೆಪಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರೊಳಗೆ ಆರೋಪ-ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಾಜಿ ಸಚಿವ ರೇಣುಕಾಚಾರ್ಯ ಗುರುವಾರ ರಾಜ್ಯ ಚುನಾವಣೆಯ ನೇತೃತ್ವ ವಹಿಸಿದ್ದ ಕೆಲ ನಾಯಕರ ಹೆಸರನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ರೇಣುಕಾಚಾರ್ಯ, ”ಸೋಲಿಗೆ ಬಿಜೆಪಿ ಕೆಲ ನಾಯಕರ ಉದ್ದಟತನ ಮತ್ತು ಧೋರಣೆಗಳೇ ಕಾರಣ. ಕೆಲ ನಾಯಕರಿಂದಾಗಿ ನಾನು ಮಾತ್ರವಲ್ಲ ಬಿಜೆಪಿ ರಾಜ್ಯದೆಲ್ಲೆಡೆ ಸೋಲಲು ಕಾರಣವಾಯಿತು. ನನಗೆ ಭಯ ಇಲ್ಲ, ನಿರ್ಭೀತಿಯಿಂದ ಮಾತನಾಡುತ್ತೇನೆ. ಸಮಯ ಬಂದಾಗ ಎಲ್ಲರ ಕುರಿತು ಮಾತನಾಡುತ್ತೇನೆ”ಎಂದು ಕಿಡಿಕಾರಿದರು.

ಚುನಾವಣೆಗೆ ನಾಲ್ಕು ದಿನ ಇರುವ ವೇಳೆ ಆನ್ಲೈನ್ ವರ್ಚುವಲ್ ಮೀಟಿಂಗ್, ಆ ಮುಖಗಳನ್ನು ನೋಡಿ ಕಾರ್ಯಕರ್ತರು ರೋಸಿ ಹೋದರು. ಅವರಿಗೆ ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ, ಇದು ಸತ್ಯ ಹೇಳುತ್ತಿದ್ದೇನೆ ಎಂದರು. ಸೆಲ್ಯೂಟ್ ಹೊಡೆಯುತ್ತಿದ್ದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಇಲ್ಲಿ ಬಂದು ಪೋಸ್ ನೀಡಲು ಅವರೇನು ದೊಡ್ಡ ಹೀರೋನಾ? ಎಂದು ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.

- Advertisement -

ಬಿಜೆಪಿ ಕಾರ್ಯಕರ್ತರಿಗೆ ನೋವಿದೆ. ಇದು ರೇಣುಕಾಚಾರ್ಯನ ಮಾತಲ್ಲ, ಅನೇಕ ನಾಯಕರು, ಮಾಜಿ ಶಾಸಕರು, ಕಾರ್ಯಕರ್ತರ ನೋವಿನ ಬಗ್ಗೆ, ಪಕ್ಷದ ಒಳಗಿನ ಆಂತರಿಕ ನೋವಿನ ಬಗ್ಗೆ ಮಾತನಾಡುತ್ತಿದ್ದೇನೆ. ಬೊಮ್ಮಾಯಿ ಅವರ ಬಗ್ಗೆ ನನ್ನ ವಿರೋಧವಿಲ್ಲ. ಅವರ ಕೈಗಳನ್ನು ಕಟ್ಟಿ ಹಾಕಲಾಗಿತ್ತು ಎಂದರು.