Home ಟಾಪ್ ಸುದ್ದಿಗಳು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್ಕರ್‌ ಹಿಂದಕ್ಕೆ ಕರೆಸಲು ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಟಿಎಂಸಿ...

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್ಕರ್‌ ಹಿಂದಕ್ಕೆ ಕರೆಸಲು ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಟಿಎಂಸಿ ಸಿದ್ಧತೆ

ನವದೆಹಲಿ : ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್ಕರ್‌ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ತೃಣಮೂಲ ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ. ಜು.೨ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ.

ರಾಜ್ಯಪಾಲ ಧನ್ಕರ್‌ ಅವರು ಸಂಸದೀಯ ವ್ಯವಹಾರಗಳು ಮತ್ತು ವಿಧಾನಸಭೆಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಬಗ್ಗೆ ಪಶ್ಚಿಮ ಬಂಗಾಳ ವಿಧಾನಸಭೆ ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾಗೆ ಮಂಗಳವಾರ ದೂರು ನೀಡಿದ್ದಾರೆ.

ವಿಧಾನಸಭೆಯಲ್ಲಿ ಮಂಜೂರಾಗಿದ್ದರೂ, ಹಲವು ಮಸೂದೆಗಳನ್ನು ರಾಜ್ಯಪಾಲರು ಸಹಿ ಮಾಡದೆ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಈ ರೀತಿ ಯಾವತ್ತೂ ಆಗಿರಲಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಅವರ (ಧನ್ಕರ್)‌ ಚಟುವಟಿಕೆಗಳನ್ನು ನೋಡಿದ ಬಳಿಕ, ರಾಜ್ಯಪಾಲರ ಹುದ್ದೆಯನ್ನೇ ರದ್ದುಗೊಳಿಸಬೇಕು ಎಂದು ನನಗನಿಸಿದೆ ಎಂದು ಟಿಎಂಸಿ ನಾಯಕ ಪ್ರಸೂನ್‌ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯಪಾಲ ಧನ್ಕರ್‌ ಅವರು ಒಂದು ಪಕ್ಷದ ಮುಖವಾಣಿಯಂತಿದ್ದಾರೆ ಎಂದು ಟಿಎಂಸಿ ಆಪಾದಿಸಿದೆ.

Join Whatsapp
Exit mobile version