Home ಟಾಪ್ ಸುದ್ದಿಗಳು ಬುಲ್ಡೋಜರ್ ಗೂಂಡಾಗಿರಿ ನಿಲ್ಲಿಸುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ

ಬುಲ್ಡೋಜರ್ ಗೂಂಡಾಗಿರಿ ನಿಲ್ಲಿಸುವಂತೆ ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ

ಬೆಂಗಳೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಾಯಕ ಜಾವೀದ್ ಮುಹಮ್ಮದ್ ರ ಬಿಡುಗಡೆಗೆ ಆಗ್ರಹಿಸಿ ಮತ್ತು ಬುಲ್ಡೋಜರ್ ಗೂಂಡಾಗಿರಿ ನಿಲ್ಲಿಸುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಬುಧವಾರ ನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು.


ಪಕ್ಷದ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ಮಾತನಾಡಿ, ದೇಶವು ಇಂದು ಅದರ ಪ್ರಜಾಪ್ರಭುತ್ವ ಬುನಾದಿಯಿಂದ ಹಳಿ ತಪ್ಪುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯ ಸರಕಾರದ ಆಡಳಿತದ ವೈಖರಿ ನಿರಕುಂಶ ಪ್ರಭುತ್ವ ಅಥವಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಮಾತ್ರವಲ್ಲ ಇಂದು ದೇಶಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಮುಹಮ್ಮದ್ ಜಾವೇದ್ ಅವರನ್ನು, ಪ್ರವಾದಿ ನಿಂದನೆಯ ವಿರುದ್ಧ ಪ್ರಯಾಗ್ ರಾಜ್ ನಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಅವರ ಕುಟುಂಬ ಸಹಿತ ಬಂಧಿಸಿರುವುದು ಖಂಡನೀಯ ಎಂದು ಹೇಳಿದರು.


ಸರಕಾರದ ವಿರುದ್ಧ ಪ್ರತಿಭಟಿಸುವ ಪ್ರಜಾಪ್ರಭುತ್ವ ಹಕ್ಕನ್ನು ಕಸಿದುಕೊಂಡಿರುವ ಭಾಜಪ ಪಟಾಲಂಗಳಿಗೆ ಇದೊಂದು ನೆಪ ಮಾತ್ರವಾಗಿದ್ದು, ಒಟ್ಟಿನಲ್ಲಿ ಸರಕಾರದ ವಿರುದ್ಧದ ಯಾವುದೇ ಪ್ರತಿಭಟನೆಯನ್ನು ಅಧಿಕಾರ ಬಲದಿಂದ ಹತ್ತಿಕ್ಕುವುದು ಇವರ ಸರ್ವಾಧಿಕಾರಿ ಧೋರಣೆಯ ಭಾಗವಾಗಿದೆ ಎಂದು ಹರಿಹಾಯ್ದರು.


ಪ್ರವಾದಿ ನಿಂದನೆ ಹೇಳಿಕೆಯ ವಿರುದ್ಧದ ವಿದೇಶಿಯರ ಪ್ರತಿಭಟನೆ, ಬಹಿಷ್ಕಾರಕ್ಕೆ ಮಣಿಯುವ ಕೇಂದ್ರ ಸರಕಾರ ಸ್ವದೇಶಿ ಜನಗಳಿಗೆ ಮಾತ್ರ ಪ್ರತಿಭಟಿಸುವ ಹಕ್ಕನ್ನೇ ನಿರಾಕರಿಸುತ್ತಿರುವುದು ಸರಕಾರದ ದ್ವಂದ್ವ ನೀತಿಯನ್ನು ಮತ್ತು ಎಲ್ಲಾ ಧರ್ಮಗಳ ಬಗ್ಗೆ ಸರಕಾರವು ಗೌರವ ಹೊಂದಿದೆ ಎಂಬ ಅಂತಾರಾಷ್ಟ್ರೀಯ ಹೇಳಿಕೆಯ ಅಪ್ರಾಮಾಣಿಕತೆಯನ್ನೂ ತೋರಿಸುತ್ತದೆ. ಮಾತ್ರವಲ್ಲ ಇಂದು ಸರಕಾರದ ಪ್ರತಿಯೊಂದು ಹೇಳಿಕೆಗಳು ಮತ್ತು ಅದಕ್ಕೆ ವಿರುದ್ಧವಾಗಿ ಅದು ಅನುಸರಿಸುತ್ತಿರುವ ನೀತಿಯು ವಿಪರ್ಯಾಸದ ಪರಮಾವಧಿಯಾಗಿದೆ ಎಂದು ತಾಹಿರ್ ಹುಸೇನ್ ಕಿಡಿಕಾರಿದರು.


ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ತಲತ್ ಯಾಸ್ಮಿನ್ ಮುಖಂಡರಾದ ರಿಯಾಜ್ ಪಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Join Whatsapp
Exit mobile version