Home ಟಾಪ್ ಸುದ್ದಿಗಳು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ

ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ

ಬೆಂಗಳೂರು: ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಶುಕ್ರವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತರು ಸಮಸ್ಯೆಯ ಸುಳಿಯಲ್ಲಿ ನಲುಗುತ್ತಿದ್ದಾರೆ. ರೈತರ ಬದುಕು ಹಸನಾಗಲು ಸರಕಾರ ಅನ್ನದಾತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ರೈತ ದಿನಾಚರಣೆಯ ನಿಮಿತ್ಯ ಸರಕಾರಕ್ಕೆ  ಹಕ್ಕೊತ್ತಾಯ ಪತ್ರ ಸಲ್ಲಿಸಿ, ಭಾರತದ ರೈತಾಪಿ ಜನತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಳುವ ಸರಕಾರಗಳು ರೈತರ ಬಗ್ಗೆ ಒಂದಿಷ್ಟೂ ಕಾಳಜಿಯನ್ನು ತೋರಿಸದೆ ಸಂಪೂರ್ಣವಾಗಿ ಅಲಕ್ಷತೆಯನ್ನೇ ಪ್ರದರ್ಶಿಸುತ್ತಲಿದೆ ಎಂದು ಟೀಕಿಸಿದರು.

   ಪಂಜಾಬ್, ಹರಿಯಾಣ ಒಳಗೊಂಡು ದೇಶದ ರೈತರು ದೆಹಲಿ ಗಡಿಗಳಲ್ಲಿ ವರ್ಷದುದ್ದಕ್ಕೂ ಹೋರಾಡಿದ ಸಂದರ್ಭದಲ್ಲಿ ನೀಡಿದ ವಾಗ್ದಾನವನ್ನು ನೆರವೇರಿಸಲು ಸರಕಾರದಿಂದ ಸಾಧ್ಯವಾಗಿಲ್ಲ. ರೈತರ ಬೆಳೆಗಳಿಗೆ ಸೂಕ್ತವಾದ ಬೆಲೆ ಒಳಗೊಂಡು ಸಮಸ್ಯೆಗಳ ಪರಿಹಾರಕ್ಕೆ ಸ್ವಾಮಿನಾಥನ್ ಆಯೋಗ ವರದಿಯ ಸಾಕಷ್ಟೂ ಶಿಫಾರಸುಗಳನ್ನು ಮಾಡಿದ್ದರೂ ಅವುಗಳನ್ನು ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದರ ಹಿಂದೆ ಕಾರ್ಪೊರೇಟ್ ಬಂಡವಾಳದ ಹಿಡಿತವಿರುವುದು ಜಗಜ್ಜಾಹೀರಾಗಿದೆ. ರೈತರ ಸಾಗುವಳಿ ಭೂಮಿಗೆ ಪಟ್ಟ ಒದಗಿಸಲು ಕಳೆದ 40-50 ವರ್ಷದಿಂದಲೂ ಸಾದ್ಯವಾಗದೆ ಹೋಗುತ್ತಿರುವುದು ಈ ದೇಶದ ದೊಡ್ಡ ದುರಂತವಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯದ ಕಬ್ಬು ಬೆಳೆಗಾರರ ಬಾಕಿ ಹಣ 1914.22 ಕೋಟಿ ಇದೆ, ರೈತರು ಬಾಕಿ ಪಾವತಿಗಾಗಿ ಹೋರಾಟ ಮಾಡುತ್ತಿದ್ದರೂ ಕಾರ್ಖಾನೆ ಮಾಲೀಕರು ಹಣ ನೀಡುತ್ತಿಲ್ಲ. ಕಾನೂನಿನ ಪ್ರಕಾರ ಕಬ್ಬು ಸರಬರಾಜು ಮಾಡಿದ 14 ದಿನದ ಒಳಗೆ ಹಣ ಪಾವತಿ ಮಾಡಬೇಕು. ಅದರೆ ವರ್ಷ ಕಳೆದರೂ ರೈತರಿಗೆ ಅವರ ಹಣ ಸಿಗುತ್ತಿಲ್ಲ. ಇದರ ಬಗ್ಗೆ ಸರ್ಕಾರವು ಮೌನ ವಹಿಸುತ್ತಿದೆ ಎಂದು ತಾಹೀರ್ ಹುಸೇನ್ ಟೀಕಿಸಿದರು.

ಹಕ್ಕೊತ್ತಾಯಗಳು

*ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

*ಸಮಗ್ರ ಭೂ ಸುಧಾರಣೆ ಮೂಲಕ ಭೂ ಹಂಚಿಕೆ ನೀತಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಭೂಮಿ ಹಂಚಿಕೆ ಮಾಡಿಕೊಡಬೇಕು.

*ಭೂಮಿ ಮತ್ತು ವಸತಿ ವಂಚಿತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು.

*40-50 ವರ್ಷಗಳಿಂದ ಭೂಮಿ ಸಾಗುವಳಿ ಮಾಡುವ ರೈತರಿಗೆ ಕೂಡಲೇ ಪಟ್ಟಾ ಒದಗಿಸಿಕೊಡಬೇಕು.

*ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆದರಿಸಿ ಬೆಲೆ ನಿಗದಿ ಮಾಡಿ ಕೊಡಬೇಕು.

*ನೀರಾವರಿ ವಂಚಿತ ರೈತರ ಸಾಗುವಳಿ ಭೂಮಿಗೆ ನೀರು ಒದಗಿಸಿಕೊಡಬೇಕು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷ ತಲ್ಹತ್ ಯಾಸ್ಮಿನ್, ಮುಖಂಡರಾದ ರಿಯಾಝ್ ಪಾಷಾ, ಮುಹಮ್ಮದ್ ಫಝಲ್ ಹುಸೇನ್, ಹುಸೇನ್, ಇಲಿಯಾಸ್ ಸೇರಿದಂತೆ ಮುಂತಾದವರು ಇದ್ದರು.

Join Whatsapp
Exit mobile version