ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಮತ್ತು ರೂಪಾಂತರಿ ಒಮಿಕ್ರಾನ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಸರಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂ ಇಂದು ರಾತ್ರಿ 10ರಿಂದ ಪ್ರಾರಂಭವಾಗಿದ್ದು, ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ.
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು, ಮದ್ಯ ಮಾರಾಟ ಮಳಿಗೆಗಳನ್ನು ರಾತ್ರಿ 8 ಗಂಟೆಗೆ ಮುಚ್ಚಿಸಲಾಯಿತು. ಎರಡು ದಿನ ಮದ್ಯ ಮಾರಾಟ ಇರದ ಕಾರಣ ವಾರಾಂತ್ಯಕ್ಕೆ ಮದ್ಯ ಖರೀದಿಗಾಗಿ ಪಾನ ಪ್ರಿಯರು ಮುಗಿ ಬಿದ್ದಿದ್ದ ದೃಶ್ಯ ಕಂಡು ಬಂತು.
ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದು, ಅಗತ್ಯ ವಸ್ತುಗಳ ಖರೀದಿ ಮತ್ತು ತುರ್ತು ಕಾರ್ಯಗಳಿಗೆ ಮಾತ್ರ ಅನುವು ಮಾಡಿಕೊಡಲಾಗುತ್ತಿದೆ.
ತುರ್ತು ಕಾರ್ಯಗಳಿಗೆ ಅಗತ್ಯವಿರುವಷ್ಟು ರಾಜ್ಯ ರಸ್ತೆ ಸಾರಿಗೆ ಹಾಗೂ ಬೆಂಗಳೂರು ನಗರ ಸಾರಿಗೆ ಬಸ್‌ಗಳು ಹಾಗೂ ಮೆಟ್ರೋ ರೈಲು ಸಂಚರಿಸಲಾಗುತ್ತಿದೆ. ಇಂದು ಮಧ್ಯಾಹ್ನದಿಂದಲೇ ವಾರಾಂತ್ಯದ ಕರ್ಫ್ಯೂ ಬಗ್ಗೆ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಿದರು.
ರಾಜ್ಯಾದ್ಯಂತ ಶನಿವಾರ ರಜೆ ಘೋಷಣೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಶನಿವಾರ ಮತ್ತು ಭಾನುವಾರ ವಾರಾಂತ್ಯದ ಕರ್ಫ್ಯೂ ಇರಲಿದ್ದು, ಕಟ್ಟುನಿಟ್ಟಾಗಿ ನಿಯಮವನ್ನು ಪಾಲಿಸುವಂತೆ ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ಆಯ್ದ ಪ್ರದೇಶಗಳಲ್ಲಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಗೆ ಅವಕಾಶವಿರುವುದಿಲ್ಲ.
ಈ ಬಾರಿ ಯಾವುದೇ ರೀತಿಯ ವಿನಾಯಿತಿ ಪಾಸ್ ಗಳನ್ನು ಜಾರಿ ಮಾಡುವುದಿಲ್ಲ. ಸರಕಾರದ ಆದೇಶದಂತೆ ಗುರುತಿನ ಚೀಟಿ, ಮುಂಗಡವಾಗಿ ಕಾಯ್ದಿರಿಸಿದ್ದ ಪ್ರಯಾಣ ಟಿಕೆಟ್ ಗಳು, ಆಸ್ಪತ್ರೆಗೆ ಹೋಗುವವರು, ಅವರ ಸಂಬಂಧಿಕರು ಸೂಕ್ತ ದಾಖಲೆಗಳನ್ನು ಜತೆಯಲ್ಲಿ ಕೊಂಡೊಯ್ಯಬೇಕು.
ಸೂಕ್ತ ದಾಖಲೆ ನೀಡಿದರೆ ಮಾತ್ರ ಓಡಾಡುವುದಕ್ಕೆ ಅನುಮತಿ ನೀಡಲಾಗುವುದು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ.
ಕೋವಿಡ್ ಸಮಯೋಚಿತ ವರ್ತನೆಗಳು ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ಸೋಂಕು ನಿಯಂತ್ರಣ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ನಿಯಮವನ್ನು ಪಾಲಿಸುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸಂಬಂಧಪಟ್ಟ ಜಿಲ್ಲಾಡಳಿತಗಳು ಸೂಚನೆ ನೀಡಿವೆ.