Home ಟಾಪ್ ಸುದ್ದಿಗಳು ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿದ್ದರಾಮಯ್ಯ

ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿದ್ದರಾಮಯ್ಯ

ಬೆಂಗಳೂರು: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಸಾಮಾಜಿಕ ನ್ಯಾಯ ಸುಮ್ ಸುಮ್ನೆ ಬರುವುದಿಲ್ಲ. ಇಂಥಾ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಳಮೀಸಲಾತಿ ಕುರಿತ ಸಚಿವ ಸಂಪುಟ ನಿರ್ಣಯಕ್ಕಾಗಿ ಮಾದಿಗ ಸಮುದಾಯ ನಾಯಕರು ಸಿದ್ದರಾಮಯ್ಯರನ್ನ ಗೃಹ ಕಚೇರಿ ಕೃಷ್ಣದಲ್ಲಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಸಿಎಂ, ಒಳಮೀಸಲಾತಿಗಾಗಿ ಮಾದಿಗ ಸಮುದಾಯ ದಶಕಗಳಿಂದ ಹೋರಾಟ ನಡೆಸಿದೆ. ಈಗ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ನಾವು ಜಾರಿ ಮಾಡಲೇಬೇಕಿದೆ. 101 ಪರಿಶಿಷ್ಟ ಜಾತಿಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಮಾಧಾನ ಮಾಡುವುದು ಸಾಧ್ಯವಿಲ್ಲದಿದ್ದರೂ ಶೇ.90ರಷ್ಟು ಸಮುದಾಯಗಳಿಗೆ ಸಮಾಧಾನ ಆಗುವ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಗೃಹ ಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ದಲಿತ ಶಾಸಕರ ಸಭೆಯಲ್ಲಿ, ಒಳಮೀಸಲಾತಿಗೆ ತಮ್ಮ ವಿರೋಧ ಇಲ್ಲ ಎನ್ನುವ ನಿರ್ಣಯ ಮಾಡಿದ್ದಾಗಿದೆ. ಹೀಗಾಗಿ ಎಲ್ಲರೂ ಒಳಮೀಸಲಾತಿ ಪರವಾಗಿದ್ದಾರೆ. ತೆಲಂಗಾಣ ಸರ್ಕಾರ ಈಗಾಗಲೇ ಒಳಮೀಸಲಾತಿ ಜಾರಿ ಸಂಬಂಧ ಒಂದು ಆಯೋಗ ರಚನೆ ಮಾಡಿದ್ದಾಗಿದೆ. ನಾನು ತೆಲಂಗಾಣ ಸಿಎಂ ಜೊತೆಗೂ ಇತ್ತೀಚಿಗೆ ಮೈಸೂರಿನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಹರಿಯಾಣದಲ್ಲೂ ಕ್ಯಾಬಿನೆಟ್ ನಿರ್ಣಯ ಆಗಿದೆ. ಆದರೆ ಆದೇಶ ಆಗಿಲ್ಲ. ನಮ್ಮ ಕ್ಯಾಬಿನೆಟ್‌ನಲ್ಲೂ ಹಿಂದೊಮ್ಮೆ ಅನೌಪಚಾರಿಕ ಚರ್ಚೆ ಮಾಡಿದ್ದೆ. ಸೋಮವಾರ ನಡೆದ ಕ್ಯಾಬಿನೆಟ್‌ನಲ್ಲಿ ಸಚಿವ ಮಹದೇವಪ್ಪ ಒಳಮೀಸಲಾತಿ ವಿಚಾರ ಪ್ರಸ್ತಾಪಿಸಿದರು ಎಂದು ಹೇಳಿದರು.

Join Whatsapp
Exit mobile version