Home ಟಾಪ್ ಸುದ್ದಿಗಳು ಮೇಕೆದಾಟು ಯೋಜನೆ ವಿಳಂಬದ ಬಗ್ಗೆ ಜನರಿಗೆ ಸತ್ಯದರ್ಶನ ಮಾಡಿಸುತ್ತೇವೆ: ಗೋವಿಂದ ಕಾರಜೋಳ

ಮೇಕೆದಾಟು ಯೋಜನೆ ವಿಳಂಬದ ಬಗ್ಗೆ ಜನರಿಗೆ ಸತ್ಯದರ್ಶನ ಮಾಡಿಸುತ್ತೇವೆ: ಗೋವಿಂದ ಕಾರಜೋಳ

ಬೆಂಗಳೂರು: ಮೇಕೆದಾಟು ಯೋಜನೆ ವಿಳಂಬಕ್ಕೆ ದಾಖಲೆ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ನವರ ಪಾದಯಾತ್ರೆಗೂ ಮುನ್ನವೇ ರಾಜ್ಯದ ಜನರಿಗೆ ಸತ್ಯದರ್ಶನ ಮಾಡಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ವಿಳಂಬದ ಬಗ್ಗೆ ದಾಖಲೆ ಬಿಡುಗಡೆ ಮೂಲಕ ಸತ್ಯ ದರ್ಶನ ಮಾಡಿಸುತ್ತೇವೆ ಎಂದರು.
ಮೇಕೆದಾಟು ಪಾದಯಾತ್ರೆ ಮಾಡಿಯೇ ಸಿದ್ಧ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಪಂಜಾಬ್ ನಲ್ಲಿ ಅವರದ್ದೇ ಸರ್ಕಾರ ಇದೆ. ಅಲ್ಲಿ ಶಾಲಾ ಕಾಲೇಜುಗಳು ಬಂದ್ ಮಾಡಿದ್ದಾರೆ. ಅಮೇರಿಕಾದಲ್ಲೂ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಕೇವಲ ಪಾದಯಾತ್ರೆ ಮೂಲಕ ಕಾಂಗ್ರೆಸ್ ನವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅಧಿಕಾರ ಇದ್ದಾಗ ಏನೂ ಮಾಡದ ಕಾಂಗ್ರೆಸ್, ಈಗ ಅಧಿಕಾರಕ್ಕಾಗಿ ಪಾದಯಾತ್ರೆ ಮಾಡುತ್ತಿದೆ. ಅವರ ಕಾಲದಲ್ಲಿ ಏನು ಮಾಡಿದ್ದರು ಎಂದು ಮಾಧ್ಯಮಗಳ ಮುಂದೆ ಇಡಲಿ. ಕೃಷ್ಣೆ ಕಡೆ ಪಾದಯಾತ್ರೆ ಮಾಡಿದ್ದರು, ಏನಾಯ್ತು? ಎಂದು ಪ್ರಶ್ನಿಸಿದರು.

ಪ್ರಧಾನಿಗಳ ಜಾಥಾಕ್ಕೆ ಅವಕಾಶ ಇದೆಯಲ್ಲ ಎಂಬ ಕೈ ನಾಯಕರ ಪ್ರಶ್ನೆ ವಿಚಾರಕ್ಕೆ ಮಾತನಾಡಿದ ಕಾರಜೋಳ, ಪ್ರಧಾನಿಗಳ ಕಾರ್ಯಗಳಿಗೆ ಅನುಮತಿ ನೀಡುತ್ತಾರೆ, ನೀಡುವುದಿಲ್ಲ ಎಂಬ ಪ್ರಶ್ನೆ ಅಲ್ಲ. ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡುವುದಷ್ಟೇ ಪ್ರಶ್ನೆ ಎಂದರು. ಜನರ ರಕ್ಷಣೆ ಮಾಡುವುದಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಸರ್ಕಾರ ಯಾವುದೇ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಮುಂದೆ ಸಮಯ -ಸಂದರ್ಭ ನೋಡಿಕೊಂಡು ಪಾದಯಾತ್ರೆ ಮಾಡಲಿ ಎಂದು ಸಲಹೆ ನೀಡಿದರು

Join Whatsapp
Exit mobile version