ಬೆಂಗಳೂರು: ನಮ್ಮ ಅಭಿಪ್ರಾಯ ತೆಗೆದುಕೊಂಡು ಮಾಡದಿರುವುದಕ್ಕೆ ನಿಗಮ ಮಂಡಳಿ ನೇಮಕ ಇಷ್ಟು ಗೊಂದಲ ಆಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಅಸಮಾಧಾನ ಹೊರ ಹಾಕಿದ್ದಾರೆ.
ನಿಗಮ ಮಂಡಳಿ ನೇಮಕ ತಡ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಗಮ ಮಂಡಳಿ ನೇಮಕಾತಿಗೆ ನಮ್ಮ ಅಭಿಪ್ರಾಯವನ್ನೂ ಪಡೆಯಬೇಕು. ಆದ್ರೆ ನಮ್ಮನ್ನ ಯಾರೂ ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿರಬಹುದು. ಆದರೆ ನಮ್ಮ ಜತೆ ಮಾತನಾಡಿ ಪಟ್ಟಿ ಮಾಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾವಾರು ಕೆಲಸ ಮಾಡಿರೋದು ನಮಗೆ ಗೊತ್ತಿರುತ್ತೆ. ಸಿಎಂ, ಪಕ್ಷದ ಅಧ್ಯಕ್ಷರು ಇದ್ದಾರೆ ಅವರಿಗೆ ಜವಾಬ್ದಾರಿ ಕೊಡಬೇಕು. ಸಿಎಂ, ಅಧ್ಯಕ್ಷರು ಜಿಲ್ಲಾ ನಾಯಕರ ಜೊತೆ ಮಾತನಾಡಿ ಪಟ್ಟಿ ಮಾಡಬೇಕು. ಆದರೆ ಈಗ ಜನರಲ್ ಸೆಕ್ರೆಟರಿ ಅವರೇ ಮಾಡ್ತಿದ್ದಾರೆ. ಪಟ್ಟಿ ನಿಧಾನವಾಗಿದೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದು ಹೇಳಿದ್ದಾರೆ.