Home ಟಾಪ್ ಸುದ್ದಿಗಳು ನೆಹರು, ಇಂದಿರಾ ಹೆಸರಲ್ಲಿ ಹಣ ಮಾಡಿಟ್ಟಿದ್ದೀವಿ: ವಿವಾದಾತ್ಮಕ ಹೇಳಿಕೆ ನಂತರ ಸ್ಪಷ್ಟನೆ ನೀಡಿದ ರಮೇಶ್ ಕುಮಾರ್

ನೆಹರು, ಇಂದಿರಾ ಹೆಸರಲ್ಲಿ ಹಣ ಮಾಡಿಟ್ಟಿದ್ದೀವಿ: ವಿವಾದಾತ್ಮಕ ಹೇಳಿಕೆ ನಂತರ ಸ್ಪಷ್ಟನೆ ನೀಡಿದ ರಮೇಶ್ ಕುಮಾರ್

ಬೆಂಗಳೂರು: ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಹೆಸರಿನಲ್ಲಿ ಹಣ ಆಸ್ತಿ ಮಾಡಿಟ್ಟಿದ್ದೀವಿ ಎಂದು ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದ  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಹೇಳಿಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯು ನನ್ನ ಗಮನಕ್ಕೆ ಬಂದಿದ್ದು, ಪೂರ್ತಿ ಭಾಷಣ ಕೇಳಿದರೆ ಮಾತ್ರ ನನ್ನ ಮಾತಿನ ಉದ್ದೇಶ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

ಎಲ್ಲವನ್ನೂ ಪಕ್ಷ ರಾಜಕಾರಣಕ್ಕೆ ಸೀಮಿತವಾಗಿ ನೋಡುವ ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಆ ಭಾಷಣದುದ್ದಕ್ಕೂ ನಾನು ದೇಶವನ್ನು, ನಾಡಿನ ಜನತೆಯನ್ನು ಉದ್ದೇಶಿಸಿ ಮಾತುಗಳನ್ನಾಡಿದೆನೇ ಹೊರತು, ಕಾಂಗ್ರೆಸ್ ಪಕ್ಷವನ್ನು ಅಲ್ಲ. ಇದು ಆ ಭಾಷಣದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ.

ಸ್ವಾತಂತ್ರ್ಯ ಬಂದಾಗ ಹಸಿವಿನಲ್ಲಿದ್ದ ದೇಶ, ಇಂದು ಈ ಪ್ರಮಾಣದ ಸುಭದ್ರತೆಯನ್ನು ಕಂಡಿದ್ದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರದ ಕುರಿತು ದೇಶ ಮರೆತರೆ ಅದು ದುರದೃಷ್ಟಕರ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲಿ ನೆಹರೂ-ಗಾಂಧಿ ಕುಟುಂಬದ ಪಾತ್ರವನ್ನೂ.. ಅದೇ ನನ್ನ ಮಾತಿನ ಉದ್ದೇಶವಾಗಿತ್ತು.

ಹಸಿವು, ಬಡತನ, ಅನಕ್ಷರತೆಗಳಲ್ಲಿದ್ದ ದೇಶವಿಂದು ಕೆಲವು ತಲೆಮಾರುಗಳ ತನಕ ಕದಲಿಸಲಾಗದ ಶಕ್ತಿಯನ್ನು ಪಡೆದುಕೊಂಡಿದ್ದರೆ ಅದಕ್ಕೆ ಇಬ್ಬರು ಹುತಾತ್ಮರನ್ನು ಹೊಂದಿರುವ ಆ ಕುಟುಂಬದ ತ್ಯಾಗವೂ ಇದೆ. ಹುಸಿ ದೇಶಭಕ್ತರ ರೀತಿಯಲ್ಲ; ದೇಶದ ಅಖಂಡತೆಗೆ, ಅಭಿವೃದ್ಧಿಗಾಗಿ ಗುಂಡಿಗೆ ಬಲಿಯಾದ ಇಬ್ಬರು ಒಂದೇ ಕುಟುಂಬದಲ್ಲಿರುವ ಉದಾಹರಣೆ ಇಡೀ ಪ್ರಪಂಚದಲ್ಲಿಲ್ಲ.

ಅಂತಹ ಕುಟುಂಬಕ್ಕೆ ದೇಶದ ಉದ್ಯಮಿಗಳು, ಕೈಗಾರಿಕಾ ಕ್ಷೇತ್ರದವರು, ರಾಜಕಾರಣಿಗಳು ಎಲ್ಲರನ್ನೂ ಸೇರಿಸಿ ಹೇಳಿದ್ದೆ ವಿನಃ , ಕಾಂಗ್ರೆಸ್ ಪಕ್ಷದವರು ಮಾಡಿಕೊಂಡಿದ್ದಾರೆ ಎಂದು ಅಲ್ಲ. ಆಗರ್ಭ ಶ್ರೀಮಂತ ಕುಟುಂಬದ ಹಿನ್ನೆಲೆಯ ಆ ಕುಟುಂಬ ದೇಶಕ್ಕಾಗಿ ದಶಕಗಟ್ಟಲೇ ಜೈಲಿನಲ್ಲಿತ್ತು. ಅವರ ಕುರಿತ ಕುತ್ಸಿತ ಮನೋಭಾವ ದುರಂತವಲ್ಲದೇ ಬೇರೇನೂ ಅಲ್ಲ. ಆ ಹಿನ್ನೆಲೆಯಲ್ಲಿ ಇವತ್ತು ಇಡೀ ದೇಶ ಸೋನಿಯಾ ಗಾಂಧಿಯವರ ಜೊತೆಗೆ ನಿಲ್ಲಬೇಕೆನ್ನುವುದು ನನ್ನ ಅಭಿಲಾಷೆ.

ಇಷ್ಟೇ ವಿಚಾರ. ಇದನ್ನು ನಾನು ಇನ್ನೂ ನೂರು ಸಾರಿ ಹೇಳುತ್ತೇನೆ, ಪುರಾವೆಗಳೊಂದಿಗೆ, ತರ್ಕದೊಂದಿಗೆ, ಅಂತಃಕರಣದೊಂದಿಗೆ. ಈ ಸತ್ಯವನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

Join Whatsapp
Exit mobile version