ನಮ್ಮ ಗ್ರಾಮದಲ್ಲಿ ನಾನಾ ರೀತಿಯ ಹಲವು ಸಮಸ್ಯೆಗಳಿವೆ. ಇದರಲ್ಲಿ ನೀರಿನ ಸಮಸ್ಯೆ ಮುಖ್ಯವಾದದ್ದು. ಇದನ್ನೆಲ್ಲಾ ಬಗೆಹರಿಸಿ ಗ್ರಾಮದ ಸರ್ವೋತ್ತಮ ಅಭಿವೃದ್ಧಿಗಾಗಿ ನಮ್ಮ ಆಡಳಿತ ಬೋರ್ಡ್ ಶ್ರಮಿಸುತ್ತಿದೆ. ಅದಕ್ಕಾಗಿ ಸರ್ವ ಪಂಚಾಯತ್ ಸದಸ್ಯರ ಸಹಕಾರ ಕೂಡ ಬಯಸುತ್ತದೆ ಎಂದು ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪೌಸ್ತಿನ್ ಡಿಸೋಜ ಹೇಳಿದ್ದಾರೆ.
ಹಿಂದಿನ ಆಡಳಿತ ವೈಫಲ್ಯದ ಕಾರಣದಿಂದ ಸಜೀಪ ಮುನ್ನೂರು ಗ್ರಾಮದ ಎಲ್ಲ ವಾರ್ಡ್ ಗಳಲ್ಲೂ ಸಮಸ್ಯೆಗಳಿವೆ. ಇದನ್ನೆಲ್ಲಾ ಹಂತ ಹಂತವಾಗಿ ಬಗೆಹರಿಸಲು ಕಾರ್ಯ ರೂಪಿಸಿದ್ದೇವೆ. ವಾರ್ಡ್ 1, ಮತ್ತು ವಾರ್ಡ್ 3 ರ ನಂದಾವರ ಭಾಗದಲ್ಲಿ ಮಿತಿ ಮೀರಿದ ನೀರಿನ ಸಮಸ್ಯೆ ಇತ್ತು ಈ ಬಗ್ಗೆ ಸ್ಥಳೀಯ ಸದಸ್ಯರ ಸಹಕಾರದಿಂದ ಅಧಿಕಾರ ವಹಿಸಿ 5 ತಿಂಗಳಲ್ಲಿ ಅಲ್ಲಿಯ ನೀರಿನ ಸಮಸ್ಯೆಗಳನ್ನು ಸುಧಾರಿಸಿಕೊಂಡು ಬಂದಿದ್ದೇವೆ. ಇನ್ನೊಂದು ವರ್ಷಗಳ ಒಳಗಾಗಿ ಸಂಪೂರ್ಣ ಸುಧಾರಿಸುವ ಭರವಸೆ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಿನ್ನೆ ಪ್ರತಿಭಟನೆಗೆ ಬಂದಿದ್ದ 4ನೇ ವಾರ್ಡಿನ ಶಾಂತಿನಗರ ಭಾಗದ ಜನರಿಗೆ ನೀರಿನ ಸಮಸ್ಯೆ ಇಲ್ಲ. ಅಲ್ಲಿ ನೀರು ಬಿಡುವ ವ್ಯಕ್ತಿಯ ಸಮಸ್ಯೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಸದಸ್ಯರಲ್ಲಿ ಸ್ಪಷ್ಟ ಮಾಹಿತಿ ಪಡೆದು ಅಲ್ಲಿಯ ಜನರ ಸಮಸ್ಯೆಗೆ ಸ್ಪಂದಿಸಲಿದ್ದೇವೆ ಎಂದು ಅಧ್ಯಕ್ಷೆ ಪೌಸ್ತಿನ್ ಡಿಸೋಜ ಪತ್ರಿಕೆಗೆ ತಿಳಿಸಿದ್ದಾರೆ