ನವದೆಹಲಿ: ಜಹಾಂಗಿರ್ ಪುರಿ ಗಲಭೆಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಹಲವು ಕಟ್ಟಡಗಳನ್ನು ಧ್ವಂಸಗೊಳಿಸಿರುವ ನಡೆಯ ವಿರುದ್ಧ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ, ನಾವು ನರಕದ ಪಥದಲ್ಲಿದ್ದೇವೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು , ‘ದೇಶದ ಕಾನೂನು ಸುವ್ಯವಸ್ಥೆಯು ಪ್ರತಿದಿನವೂ ಕುಸಿಯುವುದನ್ನು ನಾವು ನೋಡುತ್ತಿದ್ದೇವೆ. ಶೀಘ್ರದಲ್ಲೇ ದೇಶದಲ್ಲಿ ಯಾವುದೇ ಕಾನೂನು, ನಿಯಮಗಳಿಲ್ಲದಿರುವುದನ್ನು ಸಾಭೀತುಪಡಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.
‘ಒಮ್ಮೆ ನಿರಂಕುಶ ಆದೇಶಗಳು ಕಾನೂನನ್ನು ಅತಿಕ್ರಮಿಸಿದರೆ, ನಾವು ನರಕದ ಪಥದಲ್ಲಿರುತ್ತೇವೆ. ಬುಲ್ಡೋಜರ್ ಅನಿಯಂತ್ರಿತ ಆದೇಶವನ್ನು ಪ್ರತಿನಿಧಿಸುತ್ತದೆ. ಸುಪ್ರೀಂ ಕೋರ್ಟ್ ‘ಕಾನೂನು’ ಪ್ರತಿನಿಧಿಸುತ್ತದೆ. ನಿನ್ನೆ, ಬುಲ್ಡೋಜರ್ ಕಾನೂನನ್ನು ಧಿಕ್ಕರಿಸಿರುವುದನ್ನು ನಾವು ನೋಡಿದ್ದೇವೆ. ಇಂದು ಏನಾಗುತ್ತದೆ ಎಂಬುದನ್ನು ನೋಡೋಣ’ ಎಂದು ಮಾಜಿ ಗೃಹ ಸಚಿವರು ತಿಳಿಸಿದ್ದಾರೆ.
ಬಿಜೆಪಿ ಆಡಳಿತದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಅತಿಕ್ರಮಣ ತೆರವು ಕಾರ್ಯಾಚರಣೆಯ ಭಾಗವಾಗಿ ಬುಧವಾರ ಬೆಳಿಗ್ಗೆ ಮಸೀದಿಯ ಸಮೀಪವಿರುವ ಹಲವಾರು ಕಾಂಕ್ರೀಟ್ ಕಟ್ಟಡಗಳು ಮತ್ತು ತಾತ್ಕಾಲಿಕ ಶೆಡ್‌ಗಳನ್ನು ನೆಲಸಮಗೊಳಿಸಲಾಗಿತ್ತು.
ಕಾರ್ಯಾಚರಣೆ ವಿರುದ್ಧ ಜಮಿಯತ್ ಉಲೇಮಾ-ಎ-ಹಿಂದ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೆರವು ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿತ್ತು.