Home ಜಾಲತಾಣದಿಂದ ಕರಾವಳಿಯನ್ನು ನಾವು ಹಿಂದುತ್ವ ಪ್ರಯೋಗಶಾಲೆ ಮಾಡಲು ಹೊರಟಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಕರಾವಳಿಯನ್ನು ನಾವು ಹಿಂದುತ್ವ ಪ್ರಯೋಗಶಾಲೆ ಮಾಡಲು ಹೊರಟಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಉಡುಪಿ: ಕರಾವಳಿ ನಮ್ಮ ರಾಜ್ಯದ ಆರ್ಥಿಕ ವಲಯದಲ್ಲಿ ಪ್ರಮುಖವಾಗಿರುವಂಥ ಪ್ರದೇಶ. ಇಲ್ಲಿಯ ಚಟುವಟಿಕೆಗಳು, ಬಂದರುಗಳ ಅಭಿವೃದ್ಧಿ, ಮೂಲ ಉದ್ಯೋಗಕ್ಕೆ ಇಂಬು ಕೊಡುವ, ಪ್ರವಾಸೋದ್ಯಮವನ್ನು ವಿಸ್ತರಿಸುವ ದೊಡ್ಡ ಕಾರ್ಯಕ್ರಮಗಳು ಮನದಲ್ಲಿವೆ. ಬಜೆಟ್ ಬರುವವವರೆಗೆ ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಾರ್ಕಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.


ಉಡುಪಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘ ರಜತಮಹೋತ್ಸವ ಆಚರಣೆ ಮಾಡುತ್ತಿದೆ. ಉಡುಪಿ ಜಿಲ್ಲೆಯಾಗಿ 25 ವರ್ಷಗಳ ಸಂಭ್ರಮೋತ್ಸವ ಆಚರಣೆಯಾದಂತೆಯೇ ಉಡುಪಿ ಪತ್ರಕರ್ತರ ಸಂಘ ಅದೇ ವರ್ಷ ಸ್ಥಾಪನೆಯಾಗಿದ್ದು 25 ವರ್ಷಗಳು ತುಂಬಿವೆ. ಒಂದು ಸಂಘಕ್ಕೆ 25 ವರ್ಷ ನಿರಂತರವಾಗಿ ಸಾರ್ವಜನಿಕ ವಲಯದದಲ್ಲಿ ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕ, ನಿಷ್ಠೆಯಿಂದ ನಿಭಾಯಿಸಿ, ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ ಪತ್ರಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಇಡೀ ವರ್ಷ ಹಮ್ಮಿಕೊಂಡಿರುವ 25 ಕಾರ್ಯಕ್ರಮಗಳು ಯಶಸ್ವಿಯಾಗಲಿ. ಸರ್ಕಾರ ಕ್ಷೇಮನಿಧಿಯಿಂದ ಹಿಡಿದು ಇತರೆ ಎಲ್ಲಾ ಬೆಂಬಲವನ್ನು ನೀಡಲಿದೆ ಎಂದರು.


ಜನಸಾಗರ ನೋಡಿ ಸಿದ್ದರಾಮಯ್ಯ ಭಯಪಟ್ಟಿದ್ದಾರೆ


ಪ್ರಧಾನಿಗಳು ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡುತ್ತಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ರಾಹುಲ್ ಗಾಂಧಿ ಬಂದರೆ ಜನ ಸೇರುವುದಿಲ್ಲ. ಅದಕ್ಕೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಮೋದಿಯವರು ಬಂದಾಗ ಜನಸಾಗರ ನೋಡಿ ಇವರು ಭಯಪಟ್ಟಿದ್ದಾರೆ. ಸಿದ್ದರಾಮಯ್ಯ ಭಯಪಟ್ಟಿದ್ದಾರೆ. ಕಲಬುರುಗಿ, ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ನಡೆದ ಸಭೆಗಳಲ್ಲಿ ಜನಸಾಗರವೇ ಸೇರಿದ್ದನ್ನು ನೋಡಿ ಸಿದ್ದರಾಮಯ್ಯನವರು ಭಯಪಟ್ಟಿದ್ದಾರೆ. ಅವರ ಭಯ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಹಿಂದುತ್ವ ಪ್ರಯೋಗಶಾಲೆ ಮಾಡುತ್ತಿಲ್ಲ
ಕರಾವಳಿಯನ್ನು ಹಿಂದುತ್ವ ಪ್ರಯೋಗಶಾಲೆಯನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಹಿಂದುತ್ವ ಪ್ರಯೋಗಶಾಲೆ ಮಾಡಲು ನಾವು ಹೊರಟಿಲ್ಲ. ಅವರು ತುಚ್ಛೀಕರಣದ ರಾಜಕಾರಣ ಮಡುತ್ತಿದ್ದಾರೆ. ಒಂದು ವರ್ಗವನ್ನು ತಲೆ ಮೇಲೆ ಕೂರಿಸಿಕೊಂಡು ಕುಣಿಸುತ್ತಿದ್ದಾರೆ. ಇತರೆ ಬಡವರು, ದೀನದಲಿತರು, ಹಿಂದುಳಿದ ವರ್ಗದವರು ಇವರ ಬೆಂಬಲವನ್ನು ನಿರೀಕ್ಷೆ ಮಾಡಿದ್ದರು ಅವರ ಕೈಬಿಟ್ಟಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡಲು ನಾವು ಬಿಡೊಲ್ಲ ಎಂದರು.

ಕೋಲಾರದಲ್ಲಿ ದಲಿತರು, ಮುಸಲ್ಮಾನರು, ಕುರುಬರು ಎಲ್ಲರೂ ಸಿದ್ದರಾಮಯ್ಯನವರ ಮೇಲೆ ತಿರಗಿಬಿದ್ದಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Join Whatsapp
Exit mobile version