Home ಟಾಪ್ ಸುದ್ದಿಗಳು ಬಿಜೆಪಿ ಹೇಗೆ ಕರ್ನಾಟಕಕ್ಕೆ ಮಸಿ ಬಳಿದಿದೆ ಎಂದು ತಿಳಿಸಲು ಅಭಿಯಾನ ಮಾಡುತ್ತಿದ್ದೇವೆ : ಬಿ.ಕೆ ಹರಿಪ್ರಸಾದ್

ಬಿಜೆಪಿ ಹೇಗೆ ಕರ್ನಾಟಕಕ್ಕೆ ಮಸಿ ಬಳಿದಿದೆ ಎಂದು ತಿಳಿಸಲು ಅಭಿಯಾನ ಮಾಡುತ್ತಿದ್ದೇವೆ : ಬಿ.ಕೆ ಹರಿಪ್ರಸಾದ್

ಬೆಂಗಳೂರು: ಬಿಜೆಪಿಯ 40% ಸರ್ಕಾರ, ಅಧಿಕಾರಕ್ಕೆ ಬರುವ ಮೊದಲು ಇಂಡಿಯಾ ಅಗೈನ್ಸ್ಟ್ ಕರಪ್ಷನ್ ಎಂದು ಕಾಂಗ್ರೆಸ್ ವಿರುದ್ಧ ಜನರನ್ನು ಎತ್ತಿಕಟ್ಟಿದರು. 8 ವರ್ಷವಾದರೂ ಇದುವರೆಗೂ ಯಾವುದೇ ಪ್ರಕರಣ ಸಾಬೀತು ಮಾಡಲು ಆಗಿಲ್ಲ. ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಲು ಸಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬಿಜೆಪಿಯವರು ಜನರ ಹಿತಕ್ಕೆ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಇವರು ಕೋಮುವಾದದ ಮೇಲೆ ರಾಜಕೀಯ ಮಾಡುತ್ತಾರೆ. ಬೆಂಗಳೂರು ಹಾಗೂ ಕರ್ನಾಟಕ ಎಂದರೆ ಪ್ರಗತಿಪರ ರಾಜ್ಯ ಹಾಗೂ ನಗರವಾಗಿದೆ. ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ನವೋದ್ಯಮದಲ್ಲಿ ವಿಶ್ವದಲ್ಲೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಸಿಲ್ಕ್, ಸೈನ್,, ಮಿಲ್ಕ್ ನಿಂದ ಸಿಲಿಕಾನ್ ಸಿಟಿ ಆಗಿ ಬೆಳೆಯುವವರೆಗೆ ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ನೆರವಿನಿಂದ ಬೆಂಗಳೂರಿಗೆ ಬಂಡವಾಳ ಹೂಡಿಗೆ ಆಗಿದೆ. ಯಾವುದೇ ಒಂದು ಭ್ರಷ್ಟಾಚಾರದ ಆರೋಪ ನಮ್ಮ ಮೇಲೆ ಬಂದಿರಲಿಲ್ಲ. ಆದರೆ ಈಗ ಸಾರ್ವಜನಿಕ ಉದ್ದಿಮೆಗಳನ್ನು ಮಾರಲು ಹೊರಟಿದ್ದಾರೆ. ಕೇವಲ ಇಬ್ಬರು ಉದ್ಯಮಿಗಳಿಗೆ ಸಹಾಯ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹರಿಪ್ರಸಾದ್ ಕಿಡಿಗಾರಿದ್ದಾರೆ..

ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಲೋಕಪಾಲ್ ಮಸೂದೆ ತಂದಿಲ್ಲ ಎಂದು ಹೋರಾಟ ಮಾಡಿದ್ದ ಅಣ್ಣಾ ಹಜಾರೆ ಇನ್ನು ನಿದ್ದೆಯಿಂದ ಎದ್ದಿಲ್ಲ. ಅವರಿಗೆ ಈಗ ಲೋಕಪಾಲ್ ಮಸೂದೆ ಎಲ್ಲಿದೆ ಅಂತಲೇ ಗೊತ್ತಿಲ್ಲ. ಕೆಂಪಣ್ಣ ಅವರು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದು, ಇದಕ್ಕೆ ಕಾರಣ ಆಪರೇಷನ್ ಕಮಲ ಕಾರಣ.

ಬಿಜೆಪಿ ಸರ್ಕಾರದಲ್ಲಿ ವಿಜಯೇಂದ್ರ ತೆರಿಗೆ ಎಂದು ಸಂಗ್ರಹಿಸಲಾಗಿದೆ. ಆತ ಯಾವುದೇ ಶಾಸಕರಲ್ಲ. ಕೇವಲ ಬಿಜೆಪಿ ಪದಾಧಿಕಾರಿ. ಇವರ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದರೆ, ಮರುದಿನವೇ ಇಡಿ, ಐಟಿ, ಸಿಬಿಐ ದಾಳಿ ಆಗುತ್ತವೆ ಎಂದು ತಿಳಿಸಿದರು.

ಬಿಜೆಪಿ ಪರವಾಗಿದ್ದ ದೊಡ್ಡ ಉದ್ಯಮಿಯೋಬ್ಬರು ಬೆಂಗಳೂರು ಪ್ರವಾಹದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಟೀಕೆ ಮಾಡಿದ್ದಕ್ಕೆ ಅವರ ಸಂಘ ಸಂಸ್ಥೆಗಳ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಇದರ ವಿರುದ್ಧ ಜನಜಾಗೃತಿ ಮೂಡಿಸಲು, ಬಿಜೆಪಿ ಹೇಗೆ ಕರ್ನಾಟಕಕ್ಕೆ ಮಸಿ ಬಳಿದಿದೆ ಎಂದು ತಿಳಿಸಲು ಈ ಅಭಿಯಾನ ಮಾಡುತ್ತಿದ್ದೇವೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

Join Whatsapp
Exit mobile version