ಬೆಂಗಳೂರು: ನಾವು ಕನ್ನಡಿಗರು ನಮಗೆ ನಮ್ಮದೇ ಆದ ಭಾಷೆ, ನಮ್ಮದೇ ಆದ ಸ್ವಾಭಿಮಾನವಿದೆ. ನಮ್ಮ ಭಾಷೆ, ನೆಲ ಮತ್ತು ಜಲ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಮೊದಲ ನಮ್ಮ ಪ್ರಾತಿನಿಧ್ಯವನ್ನೂ ನಮ್ಮ ಕನ್ನಡ ಭಾಷೆಗೆ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹಿಂದಿ ಕುರಿತಾಗಿ ಬಾಲಿವುಡ್ ನಟ ಅಜೇಯ್ ದೇವಗನ್ ಟ್ವೀಟ್ ಸೃಷ್ಟಿಸಿದ ವಿವಾದಕ್ಕೆ ಸಂಬಂಧಿಸಿದ್ದಂತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರ ಟ್ವೀಟ್ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಸಿದ್ದನಿಲ್ಲ. ದೇಶದಲ್ಲಿ ಯಾವ, ಯಾವ ಭಾಷೆಗೆ ಯಾವ ಮಾನ್ಯತೆ ನೀಡಬೇಕು ಎಂದು ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ.ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ. ನಮ್ಮ ರಾಜ್ಯದ ಕೊಡಗು, ಮಂಗಳೂರು ಭಾಗಗಳಲ್ಲಿ ಬೇರೆ ಭಾಷೆಗಳನ್ನು ಮಾತನಾಡಿದರೂ, ನಾವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.
ನಮ್ಮ ನೋಟಿನಲ್ಲಿ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿ ಮುದ್ರಣ ಮಾಡಲಾಗಿದೆ. ಈ ನೋಟು ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಚಲಾವಣೆಯಾಗುತ್ತದೆ. ಹೀಗಾಗಿ ಭಾಷೆ ವಿಚಾರದಲ್ಲಿ ಚರ್ಚೆಯ ಅಗತ್ಯ ಏನಿದೆ? ದೇಶದ ಉತ್ತರ ಭಾಗದಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದು, ಆ ಭಾಷೆಗೆ ಯಾವ ರೀತಿ ಗೌರವ ನೀಡಬೇಕೋ ಅದನ್ನು ನೀಡಲಾಗುತ್ತಿದೆ. ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸಚಿವರು ಯಾರಾದರೂ ಈ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಉತ್ತರ ನೀಡೋಣ ಎಂದು ಹೇಳಿದರು.
ನಮ್ಮ ನೆಲ, ಜಲ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಮೊದಲ ಪ್ರಾತಿನಿಧ್ಯ ಕನ್ನಡ ಭಾಷೆಯಾಗಿರುತ್ತದೆ. ನಂತರ ನಾವು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕಿನ ಪ್ರಕಾರ ಬೇರೆ ಭಾಷೆಗಳನ್ನು ಬಳಸಬಹುದು. ನಮ್ಮ ಕೆಲವು ಸಂಸದರು ಹಿಂದಿ ಹಾಗೂ ಇಂಗ್ಲಿಷ್ ಭಾಷೆ ತಿಳಿದಿದ್ದರೂ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ಇದಕ್ಕೆ ಅವಕಾಶವಿದೆ. ನನ್ನ ಸಹೋದರ ಹಲವು ಬಾರಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ವಿರೋಧಪಕ್ಷದ ನಾಯಕರಾಗಿರುವ ಕಾರಣ ಹಿಂದಿಯಲ್ಲಿ ಮಾತನಾಡುತ್ತಾರೆ ಎಂದರು.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಯ ಗೌರವ ಉಳಿಸಿಕೊಳ್ಳಲು ನಾವು ಏನು ಮಾಡಬೇಕು ಅದನ್ನು ಮಾಡೋಣ ಎಂದು ತಿಳಿಸಿದರು.