Home ಟಾಪ್ ಸುದ್ದಿಗಳು ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ: ಮೀನುಗಳ ಮಾರಣ ಹೋಮ

ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ: ಮೀನುಗಳ ಮಾರಣ ಹೋಮ

ಕಾರ್ಗಲ್: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖವಾದ ಹಿನ್ನೆಲೆಯಲ್ಲಿ, ಶರಾವತಿ ಹಿನ್ನೀರಿನ ಮುಪ್ಪಾನೆ, ಕಟ್ಟಿನಕಾರು ತೀರಗಳಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿವೆ.

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿರುವ ಪ್ರಾದೇಶಿಕ ಜಾತಿಯ ಹೊಳೆ ಮೀನುಗಳಾದ ಹಾವು ಮೀನು, ಗೊಜಲೆ, ಕೊಡಸ, ಜಬ್ಬು ಮುಂತಾದ ಸಣ್ಣ ಜಾತಿಯ ಮೀನುಗಳು ಹೆಚ್ಚಾಗಿ ಸಾಯುತ್ತಿವೆ. ಆದರೆ, ಅವುಗಳ ಜೊತೆಯಲ್ಲಿಯೇ ಇರುವ ಕಾಟ್ಲಾ, ಗೌರಿ, ಫಾರಂ ಮೀನುಗಳಿಗೆ ಯಾವುದೇ ರೀತಿಯ ತೊಂದರೆ ಕಂಡುಬಂದಿಲ್ಲ.

ಬೇಸಿಗೆ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ಒಳವೆಗಳಲ್ಲಿ ಮೀನುಗಳಿಗೆ ಆಹಾರ ಹಾಗೂ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ.  ಮುಂಗಾರು ಮಳೆ ಆರಂಭದಲ್ಲಿ ಭೂಮಿಯ ಮೇಲಿನ ದೂಳು ಹಳ್ಳಗಳಿಗೆ ಸೇರುತ್ತದೆ. ಇದರಿಂದ ಮೀನುಗಳು ಸತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

‘ಒಂದು ವರ್ಗದ ಮೀನುಗಳಿಗೆ ಕಡಿಮೆಯಾದ ನೀರಿನಿಂದ ಸೋಂಕು ತಗುಲಿದ್ದು, ಈ ಪ್ರಮಾಣದಲ್ಲಿ ಸಾಯಲು ಕಾರಣವಾಗಿದೆ. ಈ ಬಗ್ಗೆ ಮೀನುಗಳಿಗೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಉತ್ತಮವಾಗಿ ಮಳೆ ಸುರಿಯುವುದೊಂದೇ ಇದಕ್ಕಿರುವ ಪರಿಹಾರ’ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್  ಮಾಧ್ಯಮದವರೊಂದಿಗೆ ತಿಳಿಸಿದರು.

Join Whatsapp
Exit mobile version