ಬೆಂಗಳೂರು: ಜಲ ಜೀವನ್ ಮಿಷನ್ ಯೋಜನೆ 2023ರೊಳಗೆ ಪೂರ್ಣಗೊಳಿಸುವ ಗುರಿ ಇದೆ. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯ ಇಂಜಿನಿಯರ್ಗಳ ಬಳಿ ಬಾಕಿ ಇರುವ ಎಲ್ಲಾ ಕಡತಗಳು ಒಂದು ವಾರದೊಳಗೆ ವಿಲೇವಾರಿಯಾಗಬೇಕು ಎಂದರು.
ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾದ ಜಲ್ ಜೀವನ್ ಮಿಷನ್ ಅನುಷ್ಠಾನದಿಂದ ಜನರಿಗೆ ಒಳಿತಾಗಬೇಕು. ಯಾವುದೇ ಹಂತದಲ್ಲಿ ಅದಕ್ಷತೆಯನ್ನು ಸಹಿಸುವುದಿಲ್ಲ. ಇಂಜಿನಿಯರಿಂಗ್ ವಿಭಾಗದವರು ಸರಿಯಾಗಿ ಕಾರ್ಯನಿರ್ವಹಿಸಬೇಕು. ಕೆಲಸಗಳನ್ನು ಸುಗಮವಾಗಿಸಲು ಮತ್ತೊಬ್ಬ ಅಭಿಯಂತರರನ್ನು ನೇಮಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆಯ ಬ್ಯಾಚ್ 1 ಕಾಮಗಾರಿ ಒಂದು ತಿಂಗಳೊಳಗೆ ಮುಗಿಯಬೇಕು. ಉಡುಪಿ, ದಾವಣಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯೋಜನೆಯ ಅನುಷ್ಠಾನ ಚುರುಕುಗೊಳಿಸಬೇಕು. ಈ ಯೋಜನೆಯಲ್ಲಿ ಗುಣಮಟ್ಟದ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಅವರು ಹೇಳಿದರು.
ಜೂನ್ 15 ರಂದು ಬ್ಯಾಚ್-1 ಕಾಮಗಾರಿಗಳ ಬಗ್ಗೆ ಪರಿಶೀಲನೆ ಹಾಗೂ ಜೂನ್ 30 ರಂದು ಬ್ಯಾಚ್ 2 ರ ಕಾಮಗಾರಿಗಳ ಬಗ್ಗೆ ಪರಿಶೀಲಿಸಲು ಹಾಗೂ ಪ್ರತಿ ತಿಂಗಳು ಪ್ರಗತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಜಲಜೀವನ್ ಮಿಷನ್ ಕಾರ್ಯಕ್ರಮಗಳನ್ನು ಮಾರ್ಚ್ ಅಂತ್ಯದೊಳಗೆ 80 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸುವ ಗುರಿ ನೀಡಿದ ಅವರು, ಟೆಂಡರ್‌ಗಳನ್ನು ತುರ್ತಾಗಿ ಅಂತಿಮಗೊಳಿಸಲು ಹಾಗೂ ಒವರ್ ಹೆಡ್ ಟ್ಯಾಂಕುಗಳ ಮರುವಿನ್ಯಾಸ ಮಾಡುವಂತೆ ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆ ಮೂಲಕ ಜನರಿಗೆ ಸೌಲಭ್ಯ ದೊರಕಬೇಕು. ದೂರುಗಳಿಗೆ ಅವಕಾಶ ನೀಡಬಾರದು. ಪ್ರವಾಹದಿಂದಾಗಿ ನಿರ್ಮಿಸಲಾಗಿರುವ ಪುನರ್ವಸತಿ ಗ್ರಾಮಗಳಲ್ಲಿ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿ ಜನರನ್ನು ಸ್ಥಳಾಂತರಗೊಳ್ಳಲು ಮನವೊಲಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.