ವಾಚ್ ಮ್ಯಾನ್ ನ  ಸಮಯ ಪ್ರಜ್ಞೆ; ಅಪಾಯದಿಂದ ಪಾರಾದ ಮಗು

Prasthutha|

ಶಾರ್ಜಾ: ವಾಚ್ ಮ್ಯಾನ್ ನ  ಸಮಯ ಪ್ರಜ್ಞೆಯಿಂದ  ಮಗುವೊಂದು ಅಪಾಯದಿಂದ ಪಾರಾದ ಘಟನೆ ಶಾರ್ಜಾದ  ಅಲ್ ತಾವೊನ್ ನ ವಸತಿ ಕಟ್ಟಡದಲ್ಲಿ ನಡೆದಿದೆ.

- Advertisement -

ಬಹುಮಹಡಿ ಕಟ್ಟಡದ 13 ನೇ ಮಹಡಿಯ ಕಿಟಕಿಯಿಂದ ಹೊರಬಂದ ಮಗುವನ್ನು ಗಮನಿಸಿದ ನೇಪಾಳ ಮೂಲದ ವಾಚ್ ಮ್ಯಾನ್ ಮುಹಮ್ಮದ್ ರಹಮತುಲ್ಲಾ, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಸಿರಿಯಾ ಮೂಲದ ಮಗುವೊಂದು  ಕಿಟಕಿಯ ಹೊರಗೆ ಬಂದಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ ರಹಮತುಲ್ಲಾ ಮಗುವನ್ನು ಉಳಿಸಲು ಎಲ್ಲರ ಸಹಾಯವನ್ನು ಕೋರಿದರು.

- Advertisement -

ಈ ಮಧ್ಯೆ, ಮಗು ಬಿದ್ದರೆ ಯಾವುದೇ ಗಾಯವಾಗದಂತೆ ತಡೆಯಲು ಫ್ಲ್ಯಾಟ್ ನಿವಾಸಿಗಳು ಹಾಗೂ  ಕಾರ್ಮಿಕರು ಕಂಬಳಿಗಳು ಮತ್ತು ಬೆಡ್ ಶೀಟ್ ಗಳನ್ನು ಕೆಳಗೆ ರಾಶಿ ಹಾಕಿದರು. ಈಜಿಪ್ಟ್  ಮೂಲದ ಇನ್ನೊಬ್ಬ ಬಾಡಿಗೆದಾರ ಮತ್ತು ವಾಚ್ ಮ್ಯಾನ್ ಅಪಾರ್ಟ್ ಮೆಂಟ್ ಗೆ ಧಾವಿಸಿ, ಮಗುವಿನ ತಂದೆಯ   ಅನುಮತಿ ಪಡೆದು, ಬಾಗಿಲು ಮುರಿದು ಕಿಟಕಿಯ ಬಳಿಗೆ ಬಂದರು. ಕಿಟಕಿಗೆ ತಾಗಿಕೊಂಡು   ಮಗು ನಿಂತಿತ್ತು. ಮೆಲ್ಲನೇ ವಾಚ್ ಮ್ಯಾನ್ ಮಗುವಿನ ಕೈಗಳನ್ನು ಹಿಡಿದು ಮೇಲಕ್ಕೆತ್ತಿದನು. ಕಿರಿದಾದ ಕಿಟಕಿಯ ಮೂಲಕ ಮಗುವನ್ನು ರಕ್ಷಿಸುವಲ್ಲಿ ಇಬ್ಬರು ಯಶಸ್ವಿಯಾದರು.

ಮಗು ನಿದ್ರೆಯಲ್ಲಿದ್ದ ವೇಳೆ ತಾಯಿ ಕಟ್ಟಡದ ನೆಲಮಹಡಿಯಲ್ಲಿರುವ ಅಂಗಡಿಗೆ ಹೋಗಿದ್ದರು. ಇದ್ದಕ್ಕಿದ್ದಂತೆ ಎಚ್ಚರಗೊಂಡ ಮಗು ತಾಯಿಯನ್ನು ಹುಡುಕುತ್ತಾ   ಕಿಟಕಿಯ ಬಳಿ ಬಂದಿತ್ತು ಎಂದು ಹೇಳಲಾಗುತ್ತಿದೆ.

ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಾಚ್ ಮ್ಯಾನ್ ನ  ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



Join Whatsapp