Home ಟಾಪ್ ಸುದ್ದಿಗಳು ಸಂಪುಟ ರಚನೆ: ಹೈಕಮಾಂಡ್ ನ ಹಸಿರು ನಿಶಾನೆಗಾಗಿ ಕಾಯುತ್ತಿದ್ದೇನೆ ಎಂದ ಬೊಮ್ಮಾಯಿ

ಸಂಪುಟ ರಚನೆ: ಹೈಕಮಾಂಡ್ ನ ಹಸಿರು ನಿಶಾನೆಗಾಗಿ ಕಾಯುತ್ತಿದ್ದೇನೆ ಎಂದ ಬೊಮ್ಮಾಯಿ

ನವದೆಹಲಿ,ಜು.31: ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್ ನ ಹಸಿರು ನಿಶಾನೆಗಾಗಿ ಕಾಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮುಖ್ಯಮಂತ್ರಿಯಾದ ನಂತರ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ವರಿಷ್ಠ ನಾಯಕರನ್ನು ನಿನ್ನೆ ಭೇಟಿ ಮಾಡಿ ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ಅವರು, ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರ ಸೂಚನೆಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.


ಪ್ರವಾಹಪೀಡಿತ ಪ್ರದೇಶಗಲ್ಲಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಪ್ರವಾಹಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ತಮ್ಮ ಪಿಡಿ ಅಕೌಂಟ್ ನಲ್ಲಿರುವ ಹಣ ಬಳಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಹೇಳಿದ್ದೇನೆ ಎಂದು ಹೇಳಿದರು.


ಸಂಪುಟ ರಚನೆ ಸಂಬಂಧ ವರಿಷ್ಠರು ಕರೆದರೆ ಹೋಗಿ ಚರ್ಚೆ ಮಾಡುತ್ತೇನೆ, ಇಲ್ಲದಿದ್ದರೆ ಬೆಂಗಳೂರಿಗೆ ವಾಪಸ್ಸಾಗಿ ಮುಂದಿನವಾರ ವರಿಷ್ಠರು ಬಯಸಿದರೆ ದೆಹಲಿಗೆ ಬರುತ್ತೇನೆ ಎಂದರು. ಇಂದು ಮಧ್ಯಾಹ್ನದ ಒಳಗೆ ಸಚಿವರಾಗುವವರ ಪಟ್ಟಿ ಹೈಕಮಾಂಡ್ನಿಂದ ಬರುತ್ತದೋ ಇಲ್ಲವೋ ಗೊತ್ತಿಲ್ಲ ಕಾದು ನೋಡಬೇಕು. ಒಂದು ವೇಳೆ ಇಂದು ಹೈಕಮಾಂಡ್ ನಾಯಕರಿಂದ ಸಂಪುಟ ರಚನೆಗೆ ಹಸಿರು ನಿಶಾನೆ ಸಿಗದಿದ್ದರೆ ಮುಂದಿನ ವಾರ ದೆಹಲಿಗೆ ಬರುವ ಸಂದರ್ಭ ಬರಬಹುದು. ಒಂದು ವೇಳೆ ದೂರವಾಣಿ ಮಾತುಕತೆಯಲ್ಲೇ ಸಂಪುಟ ರಚನೆಯ ಮಾತುಕತೆ ಇತ್ಯರ್ಥವಾದರೆ ದೆಹಲಿಗೆ ಬರುವ ಅಗತ್ಯವಿರುವುದಿಲ್ಲ. ಎಲ್ಲವೂ ವರಿಷ್ಠರ ತೀರ್ಮಾನದ ಮೇಲೆ ನಿಂತಿದೆ ಎಂದವರು ತಿಳಿಸಿದರು.

ನೆರೆಯ ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಗಡಿಗಳಲ್ಲಿ ಮುನ್ನೆಚ್ಚೆರಿಕೆ ವಹಿಸುವಂತೆ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೋವಿಡ್ಗೆ ಸಂಬಂಧಿಸಿದ ಎಲ್ಲ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಇಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಬರಬೇಕಾದ ಬಾಕಿ ಜಿಎಸ್ಟಿ ಹಣದ ಬಗ್ಗೆ ಚರ್ಚೆ ಮಾಡುತ್ತೇನೆ. ಕೇಂದ್ರದ ಯೋಜನೆಗಳಿಗೆ ಅನುದಾನ ನೀಡುವಂತೆಯೂ ಕೋರುತ್ತೇನೆ ಎಂದರು.

Join Whatsapp
Exit mobile version