Home ಟಾಪ್ ಸುದ್ದಿಗಳು ನಾಮಪತ್ರ ಸಲ್ಲಿಕೆಗೆ ಕೊನೆ ದಿನದವರೆಗೂ ಮತದಾರರ ಪಟ್ಟಿ ಪರಿಷ್ಕರಿಸಬಹುದು: ಹೈಕೋರ್ಟ್

ನಾಮಪತ್ರ ಸಲ್ಲಿಕೆಗೆ ಕೊನೆ ದಿನದವರೆಗೂ ಮತದಾರರ ಪಟ್ಟಿ ಪರಿಷ್ಕರಿಸಬಹುದು: ಹೈಕೋರ್ಟ್

ಬೆಂಗಳೂರು: ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅವಕಾಶವಿದೆ ಎಂದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.


ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕುವ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಆ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಸ್ಪಷ್ಟನೆ ನೀಡಿದೆ.
ಅಲ್ಲದೆ, ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಶಾಸಕರ ಹೆಸರನ್ನು ಆ ಕ್ಷೇತ್ರದ ಮತದಾರರ ಪಟ್ಟಿಯಿಂದ ತೆಗೆದುಹಾಕುವಂತಹ ಕಾರ್ಯವಾಗಬಾರದು. ಇಂತಹ ವಿಚಾರಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಪೀಠ ಸಲಹೆ ನೀಡಿದೆ.


ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ಕ್ಷೇತ್ರದಿಂದ ಸ್ಥಳಾಂತರಗೊಂಡವರ ಮತ್ತು ಮೃತಪಟ್ಟವರ ಹೆಸರು ತೆಗೆಯುವ ಮೂಲಕ ಪರಿಷ್ಕರಣೆ ಮಾಡಲು ಅವಕಾಶವಿಲ್ಲ ಎಂಬ ಶಾಸಕರ ವಾದವನ್ನು ಇದೇ ವೇಳೆ ತಿರಸ್ಕರಿಸಿರುವ ಹೈಕೋರ್ಟ್, ಮತದಾರರ ಪಟ್ಟಿ ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ. ಪ್ರಜಾಪ್ರತಿನಿಧಿ ಕಾಯಿದೆ-1950ರ ಸೆಕ್ಷನ್ 23 ಪ್ರಕಾರ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಿಗದಿಪಡಿಸಿ ಕೊನೆ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಿಸಲು ಅವಕಾಶವಿದೆ. ಆಯೋಗದ ಮುಂದೆ ಸಕಾರಣಗಳು ಇದ್ದರೆ ಅಂತಿಮ ಪಟ್ಟಿ ಪ್ರಕಟದ ನಂತರವೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.


ಕ್ಷೇತ್ರದಿಂದ ಸ್ಥಳಾಂತರಗೊಂಡ ಮತ್ತು ಮೃತಪಟ್ಟವರ ಹೆಸರನ್ನು ಮತದಾರರ ಪಟ್ಟಿಯಿಂದ ಸೇರಿಸುವುದರಿಂದ ಚುನಾವಣೆ ವೇಳೆ ಸಾಕಷ್ಟು ಗೊಂದಲ ಸೃಷ್ಟಿಯಾಗಿ ಜನಾಕ್ರೋಶ ವ್ಯಕ್ತವಾಗಲು ಕಾರಣವಾಗಬಹುದು. ಚುನಾವಣೆಗೂ ಮುನ್ನ ಸ್ಥಳಾಂತರಗೊಂಡ ಮತ್ತು ಮೃತಪಟ್ಟವರ ಹೆಸರು ಪಟ್ಟಿ ಮಾಡಿ, ಸಂಬಂಧಪಟ್ಟ ಅಧಿಕಾರಿಗೆ (ಪ್ರಿಸೈಡಿಂಗ್ ಆಫೀಸರ್) ತಲುಪಿಸುವ ಮೂಲಕ ನಕಲಿ ಮತಗಳ ಚಲಾವಣೆ ಆಗುವುದನ್ನು ತಡೆಯಬೇಕು. ಆ ನಿಟ್ಟಿನಲ್ಲಿ ಸೂಕ್ತ ಕೈಪಿಡಿ, ಮಾರ್ಗಸೂಚಿ ಅಥವಾ ಸುತೋಲೆಯನ್ನು ಚುನಾವಣಾ ಆಯೋಗ ಹೊರಡಿಸಬೇಕು ಎಂದು ಪೀಠ ಸೂಚಿಸಿದೆ.


ಅಂತಿಮವಾಗಿ ಚುನಾವಣಾ ಸಿದ್ಧತೆ, ನಿಯಮಗಳಿಗೆ ವಿರುದ್ಧವಾಗಿದೆ ಅಥವಾ ಅಕ್ರಮ ಹಾಗೂ ಏಪಕ್ಷೀಯವಾಗಿದೆ ಎಂಬುದಾಗಿ ದೃಢಪಡದ ಹೊರತು ನಿರ್ದಿಷ್ಟ ವಿಧಾನದಲ್ಲಿ ಚುನಾವಣೆ ನಡೆಸುವಂತೆ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅರ್ಜಿಯಲ್ಲಿ ಯಾವುದೇ ಅರ್ಹತೆ ಕಂಡುಬಾರದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ: ಶಿವಾಜಿನಗರ ವಿಧಾನಸಭಾ ಕ್ಷೇತದ ಅಂತಿಮ ಮತದಾರರ ಪಟ್ಟಿಯನ್ನು 2023ರ ಜನವರಿ 15ರಂದು ಪ್ರಕಟಿಸಲಾಗಿತ್ತು. ಕ್ಷೇತ್ರದಿಂದ ಸ್ಥಳಾಂತರಗೊಂಡ ಮತ್ತು ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು. ಇದರಿಂದ ಹೈಕೋರ್ಟ್ ಸೂಚನೆಯಂತೆ ಸ್ಥಳಾಂತರಗೊಂಡವರ ಹಾಗೂ ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆಯನ್ನು ಆಯೋಗ ಆರಂಭಿಸಿತ್ತು. ಅದರ ಭಾಗವಾಗಿ ಕ್ಷೇತ್ರದಿಂದ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯಿಂದ ಶಾಸಕ ರಿಝ್ವಾನ್ ಅರ್ಷದ್ ಹೆಸರು ತೆಗೆಯುವ ವಿಚಾರವಾಗಿ ನೋಟಿಸ್ ನೀಡಲಾಗಿತ್ತು. ಅದನ್ನು ಆಕ್ಷೇಪಿಸಿ ಹೈಕೋರ್ಟ್ಗೆ ಮೆಟ್ಟಿಲೇರಿದ್ದ ಶಾಸಕ ರಿಝ್ವಾನ್, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಪರಿಷ್ಕರಣೆ ಮಾಡಲು ಅವಕಾಶವಿಲ್ಲ ಎಂದು ವಾದಿಸಿದ್ದರು.
(ಕೃಪೆ: ಬಾರ್ & ಬೆಂಚ್)

Join Whatsapp
Exit mobile version