Home ಟಾಪ್ ಸುದ್ದಿಗಳು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ: ಎಂ.ಬಿ.ಪಾಟೀಲ್

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ: ಎಂ.ಬಿ.ಪಾಟೀಲ್

ಹಾಸನ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ  ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ವಿದ್ಯಾವಂತ, ವಿಚಾರವಂತರಾಗಿದ್ದು, ಅವರನ್ನು ಬೆಂಬಲಿಸುವಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮನವಿ ಮಾಡಿದರು.

ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಅವರು,ನಮ್ಮ ಅಭ್ಯರ್ಥಿ ಪದವೀಧರರ ಪರ ಕೆಲಸ ಮಾಡುವ ಆಸಕ್ತಿ ಹೊಂದಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಪರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.

ದೇಶದಲ್ಲಿ ಜವಾಹರ್‌ಲಾಲ್ ನೆಹರು ಅವರಿಂದ ಹಿಡಿದು ಇಂದಿನವರೆಗೂ ನಮ್ಮ ನಾಯಕರು ಜನಪರ ಕೆಲಸ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡುವ ಕನಸು ಕಟ್ಟಿಸಿದ್ದರು. ಮಾತ್ರವಲ್ಲ ವಿದೇಶದಿಂದ ಕಪ್ಪು ಹಣ ವಾಪಸ್ ತರುತ್ತೇನೆ ಎಂದೂ ಹೇಳಿದ್ದರು. ಆದರೆ ಅವರು ನೀಡಿದ್ದ ಎಲ್ಲಾ ಭರವಸೆ ಕನಸಾಗಿಯೇ ಉಳಿದಿವೆ ಎಂದು ದೂರಿದರು.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ರೋಹಿತ್ ಚಕ್ರತೀರ್ಥ ಗೊಂದಲ ಸೃಷ್ಟಿಸಿ ಹೋಗಿದ್ದಾರೆ. ಮನುಸ್ಮೃತಿ  ಸಂವಿಧಾನ ಆಗಬೇಕು ಎಂಬುವುದೇ ಅವರ ಮೂಲ ಅಜೆಂಡಾ ಆಗಿದೆ. ಅದನ್ನು ಮಕ್ಕಳಿಗೆ ಪಾಠದ ಮೂಲಕ ಬಿತ್ತಲು ಮುಂದಾಗಿದ್ದಾರೆ. ಈ ಮೂಲಕ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮನೆ ಮಾತಾಗಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಇದನ್ನು ಮರೆ ಮಾಚಲು ಕೋಮುಭಾವನೆ, ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ.ಆ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇವತ್ತು ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿದಿಲ್ಲ. ರೋಹಿತ್ ಚಕ್ರತೀರ್ಥ ಎಂಬಾತನ ಮೂಲಕ ಬಸವಣ್ಣ, ಕುವೆಂಪು, ಭಗತ್‌ಸಿಂಗ್, ನಾರಾಯಣಗುರು ಅವರಿಗೆ ಅವಮಾನ ಆಗಿದೆ. ಹಿಜಾಬ್ ಮೂಲಕ ಶಾಲಾ ಮಕ್ಕಳಲ್ಲಿ ವಿಷ ಭಾವನೆ ಬಿತ್ತುತ್ತಿದ್ದಾರೆ. ರೋಹಿತ್ ಚರ್ಕತೀರ್ಥ ಸಮಿತಿ ಮಾಡಿರುವ ಪುಸ್ತಕ ಪರಿಷ್ಕರಣೆಯನ್ನು ಸಂಪೂರ್ಣ ತಿರಸ್ಕರಿಸಬೇಕು. ಹಿರಿಯ ಸಾಹಿತಿಗಳು, ಇತಿಹಾಸ ತಜ್ಞರನ್ನು ಸೇರಿಸಿ ಉತ್ತಮ ಸಮಿತಿ ಮಾಡಲಿ ಎಂದು ಒತ್ತಾಯಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ನಾವು ಅಲ್ಪಸಂಖ್ಯಾತ  ಸಮುದಾಯದವರನ್ನು 2ನೇ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಜಾತ್ಯತೀತತೆ ಮೇಲೆ ನಂಬಿಕೆ ಇರುವವರು, ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು ಎನ್ನುವವರು ನಮ್ಮ ಅಭ್ಯರ್ಥಿಗೆ ಓಟು ಹಾಕ್ತಾರೆ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತಹಾಕಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬದಲಾವಣೆ ಇಲ್ಲ. ಖರ್ಗೆ ಅವರ ಜೊತೆ ಜೆಡಿಎಸ್‌ನವರು ಖಾಸಗಿಯಾಗಿ ಮಾತನಾಡಿರುವುದು ನಮಗೆ ಗೊತ್ತಿಲ್ಲ. ದೇವೇಗೌಡರು ಪ್ರಧಾನಮಂತ್ರಿ ಯಾಗಲು, ರಾಜ್ಯಸಭೆ ಸದಸ್ಯರಾಗಲು ನಾವು ಸಹಾಯ ಮಾಡಿದ್ದೇವೆ. ಹಾಗಾಗಿ ನಮಗೆ ಮತ ನೀಡಿ ಎಂದು ಜೆಡಿಎಸ್ ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದರು.

ನಾನು ಹೇಳಿಕೆ ನೀಡಿದರೆ ಸೀಳುನಾಯಿ ತರ ಮುಗಿಬೀಳ್ತಾರೆ. ನಮ್ಮ ಪಕ್ಷದವರು ಮಾತೇ ಆಡಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ನಮ್ಮ ಪಕ್ಷದ ಹಿರಿಯ ನಾಯಕರು, ನಮ್ಮಶಕ್ತಿ, ನಾವೆಲ್ಲರೂ ಅವರ ಜೊತೆಗೆ ಇದ್ದೇವೆ, ನಾವ್ಯಾರು ಅವರ ಸಹಾಯಕ್ಕೆ ಬರಬೇಕಿಲ್ಲ. ಅವರಿಗೆ ಎಲ್ಲರನ್ನೂ ಎದುರಿಸುವ ಶಕ್ತಿ ಇದೆ ಎಂದರು.

Join Whatsapp
Exit mobile version