Home ವಿದೇಶ ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಹಲವು ಮನೆಗಳು ಭಸ್ಮ, 9 ಜನರ ಸಾವು

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಹಲವು ಮನೆಗಳು ಭಸ್ಮ, 9 ಜನರ ಸಾವು

ಮೌಮೆರೆ: ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರಗೊಂಡಿದ್ದು, ಹಲವು ಮನೆಗಳು ಭಸ್ಮವಾಗಿವೆ. ಈವರೆಗೆ ಕನಿಷ್ಠ 9 ಜನರು ಸಾವಿಗೀಡಾಗಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.


ಹೋದ ವಾರದಿಂದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಉಕ್ಕಿ ಹರಿಯುತ್ತಿದ್ದು, ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಅಪಾಯದ ವಲಯವನ್ನು ವಿಸ್ತರಿಸಲಾಗಿದೆ.


ದೇಶದ ಜ್ವಾಲಾಮುಖಿ ಏಜೆನ್ಸಿಯು ಜ್ವಾಲಾಮುಖಿಯ ಅಲರ್ಟ್ ಅನ್ನು ಘೋಷಿಸಿದೆ. ಮಧ್ಯರಾತ್ರಿಯ ನಂತರ ಆಗಾಗ್ಗೆ ಸ್ಫೋಟಗಳು ಸಂಭವಿಸಿರುವುದರಿಂದ ಅಪಾಯದ ವಲಯವನ್ನು 7-ಕಿ.ಮೀಗೆ (4.3-ಮೈಲಿ) ವಿಸ್ತರಿಸಲಾಗಿದೆ. ಗುರುವಾರದಿಂದ ಜ್ವಾಲಾಮುಖಿಯು ಪ್ರತಿದಿನ 2,000 ಮೀಟರ್ (6,500 ಅಡಿ) ಎತ್ತರದವರೆಗೆ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳುತ್ತಿದೆ.


ಭಾನುವಾರ ಮಧ್ಯರಾತ್ರಿ ನಂತರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳಿದೆ. ಈ ಬಿಸಿ ಬೂದಿಯು ಹತ್ತಿರದ ಹಳ್ಳಿಗೆ ಅಪ್ಪಳಿಸಿದೆ. ಅವಘಡದಲ್ಲಿ ಕ್ಯಾಥೋಲಿಕ್ ಸನ್ಯಾಸಿಗಳ ಕಾನ್ವೆಂಟ್ ಸೇರಿದಂತೆ ಹಲವಾರು ಮನೆಗಳು ಸುಟ್ಟುಹೋಗಿವೆ ಎಂದು ಜ್ವಾಲಾಮುಖಿ ಮೇಲ್ವಿಚಾರಣಾ ಅಧಿಕಾರಿ ಫರ್ಮಾನ್ ಯೋಸೆಫ್ ಹೇಳಿದ್ದಾರೆ.

Join Whatsapp
Exit mobile version