Home ಟಾಪ್ ಸುದ್ದಿಗಳು ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿ: ಸರ್ಕಾರಕ್ಕೆ ಗಡುವು

ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿ: ಸರ್ಕಾರಕ್ಕೆ ಗಡುವು

ಬೆಂಗಳೂರು: ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡುವಂತೆ ಹಕ್ಕೊತ್ತಾಯ ಮಾಡಿರುವ ಒಕ್ಕಲಿಗರ ಸಮುದಾಯವು ರಾಜ್ಯ ಸರ್ಕಾರಕ್ಕೆ ಜ.23ರ ಗಡುವು ನೀಡಿದೆ.

 ರಾಜ್ಯ ಒಕ್ಕಲಿಗರ ಸಂಘವು  ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗರ ಮೀಸಲಾತಿ ಹೆಚ್ಚಳ ಹೋರಾಟದ ರೂಪುರೇಷೆ ಕುರಿತ ಒಕ್ಕಲಿಗರ ಸಮುದಾಯದ ಪ್ರಮುಖರ ಸಭೆಯಲ್ಲಿ  ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥಸ್ವಾಮೀಜಿಯವರು, ಪಟ್ಟನಾಯಕನಹಳ್ಳಿಮಠದ ಡಾ.ಶ್ರೀ ನಂಜಾವಧೂತ ಸ್ವಾಮೀಜಿಯವರು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು, ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶಾಸಕ ಸಿ.ಎನ್.ಬಾಲಕೃಷ್ಣ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಕ್ಕೊತ್ತಾಯದ ಮನವಿ ಪತ್ರವನ್ನು ಕಂದಾಯ ಸಚಿವ ಆರ್. ಅಶೋಕ್ರವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಹಿಂದುಳಿದ ವರ್ಗಗಳ ಪ್ರವರ್ಗ 3ಎ ನಲ್ಲಿ ಶೇ. 4ರಷ್ಟು ಮೀಸಲಾತಿ ಇದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟು ಒಕ್ಕಲಿಗರ ಜನಸಂಖ್ಯೆ ಇದೆ. ಇತರೆ ಉಪ ಪಂಗಡಗಳನ್ನು ಸೇರಿಸಿದರೆ, ಶೇ.19-21ರಷ್ಟಾಗುತ್ತದೆ. ಹೀಗಾಗ ಕನಿಷ್ಠ ಶೇ.12-15ರಷ್ಟು ಮೀಸಲಾತಿ ನೀಡಬೇಕು ಎಂದು ಪಕ್ಷಾತೀತವಾಗಿ ಆಗ್ರಹಿಸಲಾಯಿತು.

ಆಶೀರ್ವಚನ ನೀಡಿದ ಶ್ರೀ ಡಾ. ನಿರ್ಮಲಾನಂದನಾಥಸ್ವಾಮೀಜಿಯವರು ಮಾನತಾಡಿ, ಜನಾಂಗದ ಎರಡು ಕಣ್ಣುಗಳಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಗೌರವಿಸಲು ಜ.23ರಂದು ಒಕ್ಕಲಿಗರ ಮಹಾಸಂಗಮ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಹದಿನೈದು ಇಪ್ಪತ್ತು ದಿನದೊಳಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸರ್ಕಾರ ಆದಷ್ಟು ಬೇಗ ಮನವಿ ಪುರಸ್ಕರಿಸುವ ಆಶಾಭಾವನೆ ಇದೆ. ಇಲ್ಲದಿದ್ದರೆ ಮೀಸಲಾತಿ ಹೆಚ್ಚಳ ಮಾಡುವವರೆಗೂ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನುಡಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಶ್ರೀ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಭೈರವೈಕ್ಯರಾಗಿ ಜನವರಿಗೆ ಹತ್ತು ವರ್ಷವಾಗಲಿದೆ. ಮುಂದಿನ 25 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 4ಕೋಟಿ ದಾಟುವ ಅಂದಾಜಿದ್ದು, ಭವಿಷ್ಯದಲ್ಲಿ ಸಮುದಾಯದವರು ಜಮೀನುಗಳನ್ನು ಕಳೆದುಕೊಂಡು ಭೀಕರವಾದ ಆಪತ್ತು ಎದುರಿಸಬೇಕಾಗಬಹದು ಎಂದು ನುಡಿದರು.

ಪಟ್ಟನಾಯಕನಹಳ್ಳಿಮಠದ ಡಾ.ಶ್ರೀ ನಂಜಾವಧೂತ ಸ್ವಾಮೀಜಿಯವರು ಮಾತನಾಡಿ,  ದೇವೇಗೌಡರು ಮತ್ತು ಎಸ್.ಎಂ.ಕೃಷ್ಣರವರು ಸಮುದಾಯದ ಎರಡು ಕಣ್ಣುಗಳಿದ್ದಂತೆ. ಜ.23ರಂದು ಅವರಿಗೆ ಗೌರವ ಸಲ್ಲಿಸಲು ಒಕ್ಕಲಿಗರ ಮಹಾಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ ಕನಿಷ್ಠ ಶೇ.12ಕ್ಕೆ ಹೆಚ್ಚಿಸಿದರೆ ಅಂದು ವಿಜಯೋತ್ಸವ ಆಚರಿಸಲಾಗುವುದು. ಇಲ್ಲದಿದ್ದರೆ ಹೋರಾಟಕ್ಕೆ ಮುನ್ನುಡಿ ಬರೆಯಲಾಗುವುದು. ಕೇಂದ್ರ ಸರ್ಕಾರದ ಒಬಿಸಿಗೆ ಬಿಟ್ಟುಹೋಗಿರುವ ಪಂಗಡಗಳನ್ನು ಸೇರಿಸಬೇಕು. ಇಡಬ್ಲ್ಯುಎಸ್ ನಲ್ಲಿ ನಗರ ಪ್ರದೇಶದ ಸಮುದಾಯದ ಬಡವರಿಗೂ ಸೌಲಭ್ಯ ಸಿಗುವಂತಾಗಬೇಕು ಎಂದು ಹೇಳಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರು ಮಾತನಾಡಿ, ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಸರ್ಕಾರ ಹೆಚ್ಚಿಸದಿದ್ದರೆ, ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು.

ಮನವಿ ಸ್ವೀಕರಿಸಿದ ಸಚಿವ ಆರ್.ಅಶೋಕ್ ಮಾತನಾಡಿ, ಜಾತಿ ಸಮೀಕ್ಷೆ ವೈಜ್ಞಾನಿಕವಾಗಿದ್ದು, ಒಗ್ಗೂಡಿಸುವಂತಿರಬೇಕು. ಆದರೆ, ಸಮೀಕ್ಷೆಯು ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಿದೆ ಎಂಬ ಮಾತುಗಳಿವೆ. ರಾಜಕೀಯ ಪಕ್ಷ ಯಾವುದೇ ಇರಲಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾವೆಲ್ಲ ಒಗ್ಗಟ್ಟಾಗಿರಬೇಕು. ಸಮಾಜದ ಹಕ್ಕೋತ್ತಾಯಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗನಮಕ್ಕೆ ತಂದು ಚರ್ಚೆ ಮಾಡಲಾಗುವುದು. ಎಲ್ಲರೂ ಸೇರಿ ಹೋರಾಟದಲ್ಲಿ ಹೆಜ್ಜೆ ಹಾಕೋಣ. ವಿಧಾನಸೌಧದ ಮುಂದೆ ಫೆಬ್ರವರಿಯಲ್ಲಿ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ ಪ್ರತಿಷ್ಠಾಪನೆ ಆಗಲಿದೆ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸಲಿದೆ. ಎಲ್ಲಾ ಸಮುದಾಯಕ್ಕೂ ನ್ಯಾಯಸಮ್ಮತ ಮೀಸಲಾತಿ ಕಲ್ಪಿಸಲಾಗುವುದು. ಒಗ್ಗಟ್ಟಿನಿಂದ ಹೋರಾಡಿದರೆ ಯಶಸ್ಸು ಸಿಗಲಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸಮಾಜದ ಋಣ ತೀರಿಸಬೇಕು. ಸರ್ಕಾರಕ್ಕೆ ನಮ್ಮ ಹಕ್ಕು ಕೇಳುತ್ತಿದ್ದೇವೆಯೆ ಹೋರತು ಯಾರ ಹಕ್ಕನ್ನು ಕೇಳುತ್ತಿಲ್ಲ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಬೇಕು. ಇದಕ್ಕಾಗಿ ಬಹಳ ದೊಡ್ಡ ಹೋರಾಟಕ್ಕೆ ನಾವೆಲ್ಲ ಸಜ್ಜಾಗಬೇಕು. ಹಳ್ಳಿ ಹಳ್ಳಿಯಲ್ಲಿ ಮೀಸಲಾತಿ ಹೆಚ್ಚಳದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡರವರು ಮಾತನಾಡಿ, ಮೀಸಲಾತಿ ಹೆಚ್ಚಳದ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಮಾಜದ ಸಂಸದರು ಹಾಗೂ ಸಂಘದ ಪದಾಧಿಕಾರಿಗಳ ಜತೆಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶಾಸಕ ಸಿ.ಎನ್. ಬಾಲಕೃಷ್ಣರವರು ಮಾತನಾಡಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟಿದ್ದು, ಉಪಜಾತಿಗಳು ಸೇರಿದರೆ, ಶೇ,21ರಷ್ಟಾಗುತ್ತದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನಿಷ್ಠ ಶೇ.12ರಿಂದ ಶೇ. 15ರಷ್ಟು ಹೆಚ್ಚಳ ಮಾಡಬೇಕು. ಪರಮ ಪೂಜ್ಯಶ್ರೀಗಳ ಮಾರ್ಗದರ್ಶನದಂತೆ ಸಂಘ ನಡೆದುಕೊಳ್ಳಲು ಬದ್ಧವಾಗಿದೆ. ಜನಾಂಗದ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಡಲಾಗುವುದು ಎಂದು ಹೇಳಿದರು.

ಇಡಬ್ಲ್ಯುಎಸ್ ಮೀಸಲಾತಿಯ ಸೌಲಭ್ಯ ನಗರವಾಸಿಗಳಿಗೂ ಸಿಗುವಂತಾಗಬೇಕು. ಪಕ್ಷಾತೀತವಾಗಿ ಮಾಡುತ್ತಿರುವ ನಮ್ಮ ಆಗ್ರಹವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ವಕೀಲ ಸಿ.ಎಚ್.ಹನುಮಂತರಾಯ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಗಾನಂಶ್ರೀಕಂಠಯ್ಯ ಮೊದಲಾದವರು ಮೀಸಲಾತಿ ಹೆಚ್ಚಳ ಕುರಿತು ಮಾತನಾಡಿದರು.

ಸೇರಿದಂತೆ ಒಕ್ಕಲಿಗರ ಸಂಘದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ನೆಲ್ಲಿಗೆರೆ ಬಾಲು ಸ್ವಾಗತಿಸಿದರು.

ಸಚಿವರಾದ ಕೆ.ಗೋಪಾಲಯ, ಶಾಸಕರಾದ ಎಂ.ಕೃಷ್ಣಪ್ಪ, ಎಂ.ಕೃಷ್ಣಪ್ಪ(ವಿಜಯನಗರ), ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ದಿನೇಶ್ ಗೂಳಿಗೌಡ, ನಾರಾಯಣಸ್ವಾಮಿ, ರವಿ, ವಾಸಂತಿ ಶಿವಣ್ಣ, ಖಜಾಂಚಿ ಆರ್.ಪ್ರಕಾಶ್ ವಂದಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೋನಪ್ಪರೆಡ್ಡಿ, ಉಪಾಧ್ಯಕ್ಷರಾದ ಡಿ.ಹನುಮಂತಯ್ಯ, ಡಾ.ಕೆ.ವಿ.ರೇಣುಕಾಪ್ರಸಾದ್, ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ಕಾರ್ಯಾಧ್ಯಕ್ಷರಾದ ಸಿ.ದೇವರಾಜ್, ಹೆಚ್.ಎನ್.ರವೀಂದ್ರ ಸೇರಿದಂತೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಮುದಾಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಭಾಗವಹಿಸಿದ್ದರು.

Join Whatsapp
Exit mobile version