ಮಂಗಳೂರು: ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟ, ವಾಯ್ಸ್ ಆಫ್ ಬ್ಲಡ್ ಡೋನರ್ಸ್ ವತಿಯಿಂದ ಬಂದರ್ ಫ್ರೆಂಡ್ಸ್, ಬಿ ಹ್ಯೂಮನ್ ಹಾಗೂ ವಫಾ ಎಂಟರ್ ಪ್ರೈಸಸ್ ಕಾಟಿಪಳ್ಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಏಕಕಾಲಕ್ಕೆ ಕಾಟಿಪಳ್ಳ ಜಾಸ್ಮಿನ್ ಮಹಲ್ ಮತ್ತು ಬಂದರ್ ನ ಕಸಾಯಿಗಲ್ಲಿ ಸರಕಾರಿ ಉರ್ದು ಶಾಲೆಯಲ್ಲಿ ರವಿವಾರ ಜರುಗಿತು.
ಕಾಟಿಪಳ್ಳದ ಕಾರ್ಯಕ್ರಮದಲ್ಲಿ ಮಾತಾಡಿದ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥಾಪಕ ರವೂಫ್ ಬಂದರ್, ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ರಕ್ತದ ಕೊರತೆ ಎಲ್ಲೆಡೆ ಕಂಡು ಬರುತ್ತಿದ್ದು, ಇದರ ಮಹತ್ವವನ್ನು ಜನಸಾಮಾನ್ಯರು ಅರಿಯುವ ಮೂಲಕ ಆಸ್ಪತ್ರೆಗಳ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆಯನ್ನು ನೀಗಿಸಬೇಕು. ಕಳೆದ ಹಲವು ವರ್ಷಗಳಿಂದ ಸಮಾಜದಲ್ಲಿ ರಕ್ತದಾನ ಮತ್ತು ಅರಿವನ್ನು ಮೂಡಿಸುತ್ತಿರುವ ಸಂಘಟನೆ ಈ ಮೂಲಕ ಸಾವಿರಾರು ಮಂದಿಯ ಸಂಕಷ್ಟಕ್ಕೆ ಸ್ಪಂದಿಸಿದ ತೃಪ್ತಿಯಿದೆ. ಇನ್ನು ಮುಂದಿನ ದಿನಗಳಲ್ಲಿ ನೇತ್ರದಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಂಘಟನೆ ನಡೆಸಲಿದೆ. ಫೆ.15ರಂದು ಕಸಬಾ ಬೆಂಗ್ರೆಯಲ್ಲಿ ಸಂಸ್ಥೆಯು ಕುರ್’ಆನ್ ದೀನ್ ಅಸೋಸಿಯೇಷನ್ ನೇತೃತ್ವದಲ್ಲಿ ರಕ್ತದಾನ ನಡೆಸಲಿದೆ ಎಂದರು.
ಸಂಘಟನೆಯ ಅಧ್ಯಕ್ಷ ಡಾ.ಲ. ಒಸ್ವಾಲ್ಡ್ ಫುರ್ತಾಡೋ ಮಾತನಾಡಿ, ಎರಡೂ ಕೇಂದ್ರಗಳಲ್ಲಿ ಅಂದಾಜು 250ಕ್ಕೂ ಮಿಕ್ಕಿ ರಕ್ತದಾನಿಗಳು ಆಗಮಿಸಿ ರಕ್ತ ನೀಡಿದ್ದಾರೆ. ವೀಲ್ ಚೇರ್, ವಾಕರ್ ಸ್ಟಿಕ್ ಹಸ್ತಾಂತರ ಮಾಡಿದ್ದೇವೆ. ಇಬ್ಬರಿಗೆ ಕಣ್ಣಿನ ದೃಷ್ಟಿ ನೀಡುವ ಮಹತ್ಕಾರ್ಯ ನಮ್ಮ ಸಂಸ್ಥೆ ಮಾಡಿದೆ ಎಂದರು.
ರಕ್ತಕ್ಕೆ ಜಾತಿಭೇದವಿಲ್ಲ. ಯಾವುದೇ ತುರ್ತು ಸಮಯದಲ್ಲಿ ಜೀವ ಉಳಿಸಲು ರಕ್ತ ಹೊಂದಾಣಿಕೆಯಾದರೆ ನೀಡಲಾಗುತ್ತದೆ. ಜಾತಿ ನೋಡಿ ರಕ್ತ ನೀಡುವಂತಿದ್ದರೆ ಅಮೂಲ್ಯ ಜೀವ ಉಳಿಸಲು ಅಸಾಧ್ಯ. ರಕ್ತದಾನದಂತಹ ಮಹತ್ಕಾರ್ಯದಿಂದ ಸೌಹಾರ್ದತೆ ಬೆಳೆಯುತ್ತದೆ. ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನಮ್ಮ ಜಿಲ್ಲೆ, ರಾಜ್ಯದ ಬಹುದೊಡ್ಡ ಪ್ರಾಣ ಉಳಿಸುವ ಶಕ್ತಿಯಾಗಿದೆ ಎಂದು ಮಾಜಿ ಮೇಯರ್ ಅಶ್ರಫ್ ನುಡಿದರು.
ಬಂದರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಸದಸ್ಯೆ ಝೀನತ್ ಸಂಶುದ್ದೀನ್, ಬಂದರ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಫಯಾಝ್ ಬಂದರ್, ಬಿ ಹ್ಯೂಮನ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಕಾರ್ಯದರ್ಶಿ ರೂಬಿಯ ಅಖ್ತರ್, ಪ್ರಮುಖರಾದ ಅಲಿಷಾ ಅಮಿನ್, ಝಹೀರ್ ಅಬ್ಬಾಸ್ ಮುಂತಾದವರು ಉಪಸ್ಥಿತರಿದ್ದರು.
ಕಾಟಿಪಳ್ಳದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ವಫಾ ಎಂಟರ್ ಪ್ರೈಸಸ್ ನ ಸ್ಥಾಪಕ ಅಬ್ದುಲ್ ವಹಾಬ್, ಪಾಲುದಾರರಾದ ಅಹ್ಮದ್ ಖುರೇಷಿ, ಅಬ್ದುಲ್ ನಾಸಿರ್, ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಯ್ಯೂಮ್, ಮಾಧ್ಯಮ ಕಾರ್ಯದರ್ಶಿ ನಿಯಾಝ್ ಬದ್ರಿಯಾ, ಗೌರವಾಧ್ಯಕ್ಷ ಹಸನ್, ಉಪಾಧ್ಯಕ್ಷರಾದ ವಾಸಿಮ್, ಇಲ್ಯಾಸ್ ಬದ್ರಿಯಾ, ಅಮೀರ್ ಅಮೀರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.