ವಿಟ್ಲ: ಪುಣಚ ಗ್ರಾಮದ ಬರೆಂಜಾ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿ ಸೇತುವೆ ಕುಸಿದುಬಿದ್ದ ಅವಘಡದಲ್ಲಿ ಗಾಯಗೊಂಡ ಏಳು ಮಂದಿ ಕಾರ್ಮಿಕರು ಆಸ್ಪತ್ರೆಗಳಲ್ಲಿ ಚೇತರಿಸುತ್ತಿದ್ದಾರೆ. ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುತ್ತಿಗೆದಾರ ಕಡಬದ ನಿವಾಸಿ ರಾಜೇಂದ್ರ ಪ್ರಸಾದ್ ಶೆಟ್ಟಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಏಳು ಮಂದಿಯ ಪೈಕಿ ಆರು ಮಂದಿಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪುತ್ತೂರು ಆಸ್ಪತ್ರೆಯಲ್ಲಿ ಓರ್ವ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ.
ಮಲ್ಲಿಪ್ಪಾಡಿಯಲ್ಲಿ ಹಾದು ಹೋಗುವ ತೋಡಿಗೆ ಸೇತುವೆ ನಿರ್ಮಾಣ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದ್ದು ಕುಸಿದು ಬಿದ್ದ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ.