Home ಟಾಪ್ ಸುದ್ದಿಗಳು ನೆಹರೂ ದೇಶಕ್ಕಾಗಿ ತಮ್ಮ ಆಸ್ತಿಯನ್ನೇ ಕೊಟ್ರು, ನೀವು 10 ಪೈಸೆಯಾರೂ ಕೊಟ್ಟಿದ್ದೀರಾ ? : ಸಿ.ಟಿ.ರವಿ...

ನೆಹರೂ ದೇಶಕ್ಕಾಗಿ ತಮ್ಮ ಆಸ್ತಿಯನ್ನೇ ಕೊಟ್ರು, ನೀವು 10 ಪೈಸೆಯಾರೂ ಕೊಟ್ಟಿದ್ದೀರಾ ? : ಸಿ.ಟಿ.ರವಿ ವಿರುದ್ಧ ವಿಶ್ವನಾಥ್ ಗರಂ

ಮೈಸೂರು: ದೇಶದ ಮೊದಲ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ ದೇಶಕ್ಕಾಗಿ ತಮ್ಮ ಆಸ್ತಿಯನ್ನೇ ಬರೆದು ಕೊಟ್ಟಿದ್ದಾರೆ, ನೀವೇನು 10 ಪೈಸೆಯಾದರೂ ಕೊಟ್ಟಿದ್ದೀರಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಅದೇ ಪಕ್ಷದ ಶಾಸಕ ಎಚ್. ವಿಶ್ವನಾಥ್ ಟೀಕಾಪ್ರಹಾರ ನಡೆಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮೊದಲು ದೇಶಕ್ಕೆ ನೀವೇನು ಕೊಟ್ಟಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ. ಈ ರೀತಿ ಅಪ್ರಯೋಜಕ ಟೀಕೆಗಳನ್ನು ಮಾಡಲು ನಾಚಿಕೆ ಆಗಲ್ವಾ ಎಂದು ಸಿ.ಟಿ.ರವಿ ವಿರುದ್ಧ ಕಿಡಿಕಾರಿದರು. ನೆಹರೂ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೊದಲು ಅವರ ಬಗ್ಗೆ ಸಿ.ಟಿ.ರವಿ ಓದಿಕೊಳ್ಳಲಿ. ನೆಹರೂ ಅವರು ಅಧಿಕಾರದ ಅವಧಿಗಿಂತ ಹೆಚ್ಚಿನ ಕಾಲ ಜೈಲಿನಲ್ಲಿದ್ದರು. ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿತ್ತು. ದೇಶಕ್ಕೆ ಶಾಂತಿ ಸಂದೇಶ ಸಾರಿದವರು ನೆಹರೂ. ಇವರ ಬಗ್ಗೆ ಲಘುವಾಗಿ ರವಿ ಮಾತಾಡಿರುವುದು ಸರಿಯಲ್ಲ. ಇದು ಬಿಜೆಪಿ ಪಕ್ಷಕ್ಕೂ ಶೋಭೆ ತರುವುದಿಲ್ಲ ಎಂದು ಹೇಳಿದರು.


ನೆಹರೂ ಅವರು ಕಾಲವಾದಾಗ ವಾಜಪೇಯಿ ಮರುಗಿದ್ದರು. ನೆಹರೂ ಆಡಳಿತವನ್ನು ಹೊಗಳಿದ್ದರಲ್ಲದೇ, ರಾಜಕುಮಾರನೊಬ್ಬನನ್ನು ಭಾರತ ಕಳೆದುಕೊಂಡಿದೆ ಎಂದಿದ್ದರು. ಈ ಮಾತುಗಳು ಸಿ.ಟಿ.ರವಿ ಅವರಿಗೆ ಅರ್ಥವಾಗಬೇಕು ಎಂದು ಕುಟುಕಿದರು.
ಹುಕ್ಕಾ, ಬಾರ್ ಏನಿದು. ನೆಹರೂ ಭಾರತದ ಅಸ್ಮಿತೆ. ಇನ್ನಾರನ್ನೋ ರಮಿಸಲು, ಒಬ್ಬರನ್ನು ತೆಗಳುವುದು ಖಂಡನೀಯ. ನಿಮ್ಮ ಹೇಳಿಕೆ ವಾಪಸ್ ಪಡೆದು ಸಮಜಾಯಿಷಿ ಕೊಡಿ ಎಂದು ಒತ್ತಾಯಿಸಿದರು.


ರವಿ ವಿರುದ್ಧ ಮಾತನಾಡಲು ಹೋಗಿ ಪ್ರಿಯಾಂಕ ಖರ್ಗೆ, ವಾಜಪೇಯಿ ಅವರನ್ನು ‘ಕುಡುಕ’ ಎಂದುಬಿಟ್ಟರು. ಕವಿ ಹೃದಯದ ವಾಜಪೇಯಿ. ಅವರ ಭಾಷಣ ಕೇಳಿ, ಬರಹಗಳನ್ನು ಓದಿ. ಅಂತಹ ವಾಜಪೇಯಿ ಬಗ್ಗೆ ಈ ರೀತಿ ಮಾತಾನಾಡುವುದು ಸರಿಯಲ್ಲ. ನೆಹರೂ ಹಾಗೆ ವಾಜಪೇಯಿ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ. ಅವರ ಬಗ್ಗೆ ಕೀಳಾಗಿ ಮಾತನಾಡುವ ನಿಮಗೆ ಬುದ್ದಿ ಇದೆಯಾ? ನಿಮ್ಮ ತಂದೆ ನೋಡಿ ಕಲಿತಿಕೊ ಎಂದು ಪ್ರಿಯಾಂಕಾ ಖರ್ಗೆ ವಿರುದ್ಧವೂ ವಿಶ್ವನಾಥ್ ಕಿಡಿಕಾರಿದರು.

Join Whatsapp
Exit mobile version