ವಿಶ್ವಕರ್ಮ ಸಮುದಾಯ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಬೇಕು; ಡಾ. ಚಂದ್ರಶೇಖರ್ ಕಂಬಾರ

Prasthutha|

ಬೆಂಗಳೂರು; ವಿಶ್ವ ಕರ್ಮ ಜನಾಂಗ ದೇಶ, ವಿದೇಶಗಳಲ್ಲಿ ಮಹೋನ್ನತ ಕೆಲಸ ಮಾಡುತ್ತಿದ್ದು, ಇಂತಹ ಸಮುದಾಯ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಇದು ಸೂಕ್ತ ಕಾಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ಹೇಳಿದ್ದಾರೆ.
ನಾಯಂಡಹಳ್ಳಿ ಬಳಿ ವಿಶ್ವಕರ್ಮ ಸೇವಾಪ್ರತಿಷ್ಠಾನ ಉಪಾಧ್ಯಕ್ಷ ಹಾಗೂ ಜೆಡಿಎಸ್ ಉಪಾಧ್ಯಕ್ಷ ಡಾ. ಬಿಎಂ ಉಮೇಶ್ ಕುಮಾರ್ ನೇತೃತ್ವದಲ್ಲಿ ಹಾಗೂ ವಿಶ್ವಕರ್ಮ ಜಗದ್ಗುರು ಪೀಠ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ, ಆಯೋಜಿಸಿದ್ದ ರಾಜ್ಯಮಟ್ಟದ ವಿಶ್ವಕರ್ಮ ಸಮಾಜದ ಬೃಹತ್ ಜನ ಜಾಗೃತಿ ಸಮಾವೇಶ ಉದ್ಘಾಟಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅನುಪಸ್ಥಿತಿಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ವಿಶ್ವಕರ್ಮ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಡಾ. ಚಂದ್ರಶೇಖರ್ ಕಂಬಾರ, ವಿಶ್ವಕರ್ಮ ಜನಾಂಗ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಬೇಕು ಎಂದರು.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಘಟನೆಯಾಗಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಜನಾಂಗದವರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಸೇರಿರುವುದು ಉತ್ತಮ ಬೆಳವಣಿಗೆ. ಈ ವೈಭವವನ್ನು ನೋಡಲು ಎರಡು ಕಣ್ಣು ಸಾಲದು. ದೇಶ ವಿದೇಶಗಳಲ್ಲಿ ಸಾಕಷ್ಟು ಕಡೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ನಮ್ಮ‌ಜನಾಂಗ ಕೆತ್ತಿರುವ ಶಿಲೆಗಳು ಹಾಗೂ ಆಭರಣಗಳು ಕಂಡು ಬರುತ್ತವೆ. ಭಾರತೀಯ ಆಭರಣ ಗುಣ ಎಲ್ಲಾ ದೇಶದ ಆಭರಣಗಳನ್ನು ಮೀರಿಸುತ್ತದೆ. ಆಭರಣ ಗುಣವನ್ನು ಮೀರಿ ರಾಜಕೀಯವಾಗಿ ಮೇಲುಗೈ ಸಾಧಿಸಬೇಕು. ಒಟ್ಟಾರೆ ವಿಶ್ವ ಕರ್ಮ ಜನಾಂಗದ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ನ ಹಿರಿಯ ಮುಖಂಡ ಡಾ. ಟಿ.ಎ. ಶರವಣ ಮಾತನಾಡಿ, ವಿಶ್ವಕರ್ಮ ಜನಾಂಗ ರಾಜಕೀಯವಾಗಿ ಹಿಂದುಳಿದಿದ್ದು, ಸೂಕ್ತ ಪ್ರಾತಿನಿಧ್ಯೆ ದೊರೆಯುತ್ತಿಲ್ಲ. ಆದರೆ ಜೆಡಿಎಸ್ ಸಮುದಾಯಕ್ಕೆ ಸೂಕ್ತ ಅವಕಾಶಗಳನ್ನು ಕಲ್ಪಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರ ಸ್ವಾಮಿ ಮೂರನೇ ಬಾರಿ ಮುಖ್ಯಮಂತ್ರಿಯಾಗಲಿದ್ದಾರೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆಗ ಸಮಾಜದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತೇನೆ. ಡಾ. ಉಮೇಶ್ ಕುಮಾರ್ ಅವರಿಗೆ ವೀರಶೈವ ಅಭಿವೃದ್ಧಿ ನಿಗಮದ ಸಾರಥ್ಯ ವಹಿಸುತ್ತೇವೆ ಎಂದರು.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ರಂಗ ರಚನೆಯಾಗುತ್ತಿದ್ದು, 18 ಪಕ್ಷಗಳ ಮುಖಂಡರು ಒಂದೆಡೆ ಸೇರಿ ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಸಭೆಗೆ ತಪ್ಪದೇ ಭಾಗವಹಿಸುವಂತೆ ಒತ್ತಡ ಹಾಕಿದ ಪರಿಣಾಮ ಕುಮಾರ ಸ್ವಾಮಿ ಅನಿವಾರ್ಯವಾಗಿ ಸಭೆಯಿಂದ ದೂರ ಉಳಿದಿದ್ದಾರೆ. ಆದರೆ ಜೆಡಿಎಸ್ ಪಕ್ಷ ಸಣ್ಣ ಸಮುದಾಯಗಳ ಹಿತ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಜೆಡಿಎಸ್ ನಿಂದ ಮಾತ್ರ ವಿಶ್ವಕರ್ಮ ಸಮುದಾಯದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಡಾ.ಟಿ.ಎ. ಶರವಣ ಪ್ರತಿಪಾದಿಸಿದರು.

ಡಾ.ಬಿ.ಎಂ ಉಮೇಶ್ ಕುಮಾರ್ ಮಾತನಾಡಿ, ಕರ್ಮ ಸಿದ್ದಾಂತವನ್ನ ಪಾಲಿಸುತ್ತಾ ಬಂದಿರುವ ಶ್ರಮಿಕ ಜನಾಂಗವಾದ ವಿಶ್ವಕರ್ಮ ಸಮಾಜ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವಿಲ್ಲದೆ ಸೊರಗುತ್ತಿದ್ದು, ಸಮಾಜಕ್ಕೆ ನ್ಯಾಯ ಕಲ್ಪಿಸುವ ಉದ್ದೇಶದಿಂದ
ಜನಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ. ಇದು ಕೇವಲ ಮಾತಿನಿಂದ ಸಾಧ್ಯವಿಲ್ಲ. ಮಾತು ಕೃತಿಯಾಗಲು ನಾವೆಲ್ಲರೂ ಒಗ್ಗಟ್ಟಾಗಬೇಕಿದ್ದು, ಒಂದೇ ಧ್ವನಿಯಿಂದ ಹೋರಾಟ ಮಾಡಬೇಕು ಎಂದು ಹೇಳಿದರು.

- Advertisement -