ನೋಯ್ಡಾ: ಉತ್ತರಪ್ರದೇಶದ ನೋಯ್ಡಾ ವಲಯದಲ್ಲಿ 7.5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ 100 ಮೀಟರ್ ಮತ್ತು97 ಮೀ. ಎತ್ತರದ ಸೂಪರ್ಟೆಕ್ ಅವಳಿ ಟವರ್ಗಳನ್ನು ಕೇವಲ 9 ಸೆಕೆಂಡುಗಳಲ್ಲಿ ಧ್ವಂಸಗೊಳಿಸುವುದಾಗಿ ಸುಪ್ರೀಂ ಕೋರ್ಟ್ಗೆ ನೋಯ್ಡಾ ಪ್ರಾಧಿಕಾರ ಮಾಹಿತಿ ನೀಡಿದೆ.
2,500 ಕೆಜಿ ಸ್ಫೋಟಕದ ಸಹಾಯದಿಂದ 9 ಸೆಕೆಂಡುಗಳ ಅಂತರದಲ್ಲಿ 40 ಅಂತಸ್ತಿನ ಅವಳಿ ಕಟ್ಟಡ ಮೇ 22ರ ಮಧ್ಯಾಹ್ನ 2.30ಕ್ಕೆ ನೆಲಸಮವಾಗಲಿದ್ದು, ಈ ಪ್ರಕ್ರಿಯೆಯ ವೆಚ್ಚವನ್ನು ಸೂಪರ್ಟೆಕ್ ಕಂಪನಿಯೇ ಭರಿಸಲಿದೆ.
ಯುಪಿ ಅಪಾರ್ಟ್ಮೆಂಟ್ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಈ ಅವಳಿ ಟವರ್ಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪದ ಮೇರೆಗೆ, ಈ ಅವಳಿ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಸುಪ್ರೀಂ ಕೋರ್ಟ್ 2021ರ ಆ.31ರಂದು ತೀರ್ಪು ನೀಡಿತ್ತು.
ಈ ಟವರ್ಗಳ ಸುತ್ತಮುತ್ತ ವಾಸಿಸುವ ಸುಮಾರು 1500 ಕುಟುಂಬಗಳನ್ನು 5 ಗಂಟೆಗಳ ಕಾಲ ಸ್ಥಳಾಂತರಿಸ ಲಾಗುತ್ತದೆ. 1 ಗಂಟೆ ಕಾಲ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇಯನ್ನು ಮುಚ್ಚಲಾಗುತ್ತದೆ. ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅವಳಿ ಟವರ್ಗಳಿಂದ 9 ಮೀ. ದೂರದಲ್ಲಿರುವ 12 ಅಂತಸ್ತಿನ ಕಟ್ಟಡವನ್ನು ರಕ್ಷಿಸಲು ಉಕ್ಕಿನ ಶಿಪ್ಪಿಂಗ್ ಕಂಟೈನರ್ಗಳನ್ನು ಇಡಲಾಗುತ್ತದೆ. ಪಕ್ಕದ 4 ಕಟ್ಟಡಗಳ ರಕ್ಷಣೆಗಾಗಿ ಜಿಯೋಟೆಕ್ಸ್ಟೈಲ್ ಫ್ಯಾಬ್ರಿಕ್ನ ಪರದೆ ಹಾಕಲಾಗುತ್ತದೆ. ಧ್ವಂಸಗೊಂಡಾಗ ಏಳುವ ದಟ್ಟ ಧೂಳುಮಿಶ್ರಿತ ಹೊಗೆ ಮಾಯವಾಗಲು ಸುಮಾರು 10 ನಿಮಿಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.