ಮಂಗಳೂರು: ಮಂಗಳೂರು ನಗರದಲ್ಲಿ 2016ರ ಮಾರ್ಚ್ 21ರಂದು ಅಮಾನುಷವಾಗಿ ಹತ್ಯೆಯಾದ ಮಾಹಿತಿ ಹಕ್ಕುಗಳ ಕಾರ್ಯಕರ್ತ, ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ಇದೀಗ 6 ವರ್ಷಗಳ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.
ಸರಕಾರ ನೇಮಿಸಿದ ವಿಶೇಷ ಅಭಿಯೋಜಕರಾದ ಖ್ಯಾತ ವಕೀಲ ಎಸ್.ಬಾಲಕೃಷ್ಣನ್ ಅವರು ಸರಕಾರದ ಪರವಾಗಿ ವಾದಿಸುತ್ತಿದ್ದಾರೆ. ಪ್ರಕರಣವು ಮಂಗಳೂರು 6 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.
ಜ. 3ರಿಂದ ಜ.5ರ ತನಕ ಮೊದಲ ಹಂತದ ಸಾಕ್ಷಿದಾರರ ವಿಚಾರಣೆ ನಡೆಯಿತು.
ವಿಚಾರಣೆ ಸಂಧರ್ಭದಲ್ಲಿ ಪ್ರಕರಣದ ನಂಬರ್ ಒನ್ ಆರೋಪಿ ನರೇಶ್ ಶೆಣೈ, ಎರಡನೇ ಆರೋಪಿ ಶ್ರೀಕಾಂತ್, 3 ನೇ ಆರೋಪಿ ಶಿವಪ್ರಸಾದ್ ಯಾನೆ ಶಿವ ಯಾನೆ ಶಿವಪ್ರಸಣ್ಣ, 4ನೇ ಆರೋಪಿ ವಿನಿತ್ ಪೂಜಾರಿ, 5 ನೇ ಆರೋಪಿ ನಿಷಿತ್ ದೇವಾಡಿಗ , 6ನೇ ಆರೋಪಿ ಶೈಲೇಶ್ ಯಾನೆ ಶೈಲು, 7ನೇ ಆರೋಪಿ ಮಂಜುನಾಥ್ ಶೆಣೈ ಯಾನೆ ಮಂಜು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಹೈ ಪ್ರೊಫೈಲ್ ಪ್ರಕರಣ:
ವಿನಾಯಕ ಬಾಳಿಗಾ ಕೊಲೆ ಪ್ರಕರಣದ ವಿಚಾರಣೆಯ ಮೊದಲ ದಿನದ ವಿಚಾರಣೆಯಲ್ಲಿ ಸಾಕ್ಷಿಗಳಾದ ಭಾಮಿ ಸುಧಾಕರ್ ಶೆಣೈ, ರಾಯಿ ಗಣಪತಿ ಬಾಳಿಗಾ, ಚೇತನ್ ಕಾಮತ್ , ಚಂದ್ರಕಾಂತ್ ಕಾಮತ್ ಹಾಗೂ ವಿಶ್ವನಾಥ್ ಕಾಮತ್ ರವರ ಸಾಕ್ಷಿ ವಿಚಾರಣೆ ನಡೆಯಿತು.
2ನೇ ದಿನದಲ್ಲಿ ಸಾಕ್ಷಿಗಳಾದ ಕಾರ್ತಿಕ್ ಪೈ, ಮುಹಮ್ಮದ್ ಹರ್ಷಾದ್, ದಿನೇಶ್ ಬಾಳಿಗಾ, ರಾಧಾ, ಸುಲಕ್ಷಣ, ಸೂಜಿರ್ ಬಾಲಕೃಷ್ಣ ಶೆಣೈ, ರಾಜೇಶ್ ಶೆಟ್ಟಿ, ಪದ್ಮನಾಭ ಮೂಲ್ಯ, ದೀಕ್ಷಿತ್ ಶೆಟ್ಟಿ ಅವರು ಸಾಕ್ಷಿ ವಿಚಾರಣೆಗೆ ಹಾಜರಾದರು.
ಆರೋಪಿಗಳ ಪೈಕಿ ವಿಘ್ನೇಷ್ ನಾಯಕ್ ಎಂಬಾತ 2020 ನವೆಂಬರ್ ನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ , ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ವಿನಾಯಕ ಬಾಳಿಗ ಕೊಲೆ ಪ್ರಕರಣದ ತ್ವರಿತ ವಿಚಾರಣೆಗೆ ಆಗ್ರಹಿಸಿ ದೇಶ ಪ್ರೇಮಿ ಸಮಾನ ಮನಸ್ಕ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದವು.
ಸಾರ್ವಜನಿಕ ಒತ್ತಡಕ್ಕೆ ಮಣಿದು ಎರಡು ತಿಂಗಳ ಹಿಂದೆ ನವೆಂಬರ್ 2 ರಂದು ಹಿರಿಯ ಹೈಕೋರ್ಟ್ ವಕೀಲ ಬೆಂಗಳೂರಿನ ಎಸ್ .ಬಾಲಕೃಷ್ಣನ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ಸರಕಾರ ನೇಮಿಸಿತ್ತು. 6 ವರ್ಷಗಳ ಬಳಿಕ ಇದೀಗ ಪ್ರಕರಣ ವಿಚಾರಣೆ ಆರಂಭವಾಗಿದೆ.