►ಅನುಮತಿ ರದ್ದುಪಡಿಸಲು ನಿರ್ದೇಶನ ನೀಡಲು ಡಿಜಿಪಿಗೆ ಮನವಿ
ಬೆಂಗಳೂರು: ರಾಜಕೀಯ ಒತ್ತಡಕ್ಕೆ ಮಣಿದು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣ–ರತಿ ಮೂರ್ತಿ ಪ್ರತಿಷ್ಠಾಪಿಸಲು ಆಯುಕ್ತರು ಅನುಮತಿ ನೀಡಿರುವುದು ಪೂಜಾ ಸ್ಥಳಗಳ ಕಾಯ್ದೆ 1991ರ ಉಲ್ಲಂಘನೆಯಾಗಿದೆ. ರಾಜ್ಯದ ಡಿಜಿಪಿಯವರು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಅನುಮತಿಯನ್ನು ರದ್ದು ಪಡಿಸಲು ನಿರ್ದೇಶನ ನೀಡಬೇಕು ಎಂದು ಎಸ್’ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 1994ರ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿ ಕರ್ಫ್ಯೂ, ಪ್ರತಿಬಂಧಕಾಜ್ಞೆ ಇದ್ದಾಗಿಯೂ ಈದ್ಗಾ ಮೈದಾನಕ್ಕೆ ಅಕ್ರಮ ಪ್ರವೇಶ ಮಾಡಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದ ಸಂಧರ್ಭದಲ್ಲಿ ಉಂಟಾಗಿದ್ದ ಗೋಲಿಬಾರ್ ಸಂಧರ್ಭದಲ್ಲಿ 6 ಜೀವಗಳು ಬಲಿಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟನ್ನು ಹುಬ್ಬಳ್ಳಿಯ ನ್ಯಾಯಾಲಯ ಹೊರಡಿಸಿತ್ತು. ಜಾಮೀನು ರಹಿತ ವಾರೆಂಟನ್ನು ಹುಬ್ಬಳ್ಳಿಯ ನ್ಯಾಯಾಲಯ ಹೊರಡಿಸಿದ ಹಿನ್ನೆಲೆಯಲ್ಲಿ 2004ರ ಆಗಸ್ಟ್’ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಉಮಾ ಭಾರತಿ ರಾಜೀನಾಮೆ ನೀಡಬೇಕಾಯಿತು ಎಂದು ಅವರು ನೆನಪಿಸಿದ್ದಾರೆ.
ಹೋಳಿ ಹಬ್ಬ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಆದೇಶವನ್ನು ಹೊರಡಿಸಿದ್ದರು. ಇದಕ್ಕೂ ಈಗಾಗಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಪಟ್ಟು ಹಿನ್ನೆಲೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ತುರ್ತು ಸಭೆ ಕರೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ, ಹು-ಧಾ ಪೊಲೀಸ್ ಆಯುಕ್ತ ರಮಣಗುಪ್ತಾ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಪಾಲಿಕೆ ಆಯುಕ್ತರು ಈದ್ಗಾದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.