Home ಟಾಪ್ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾದ ಸಂತ್ರಸ್ತೆ ಯುವತಿ ವಿಡಿಯೋ | SIT ವಿರುದ್ಧ ಜಗದೀಶ್ ಆಕ್ರೋಶ

ಮಾಧ್ಯಮಗಳಲ್ಲಿ ಪ್ರಸಾರವಾದ ಸಂತ್ರಸ್ತೆ ಯುವತಿ ವಿಡಿಯೋ | SIT ವಿರುದ್ಧ ಜಗದೀಶ್ ಆಕ್ರೋಶ

ಬೆಂಗಳೂರು: ‘ಸಿ.ಡಿ. ಪ್ರಕರಣದ ಸಂತ್ರಸ್ತೆ ಯುವತಿಯ ವೀಡಿಯೋವನ್ನು ಇಲಾಖೆಯ ಅಧಿಕಾರಿಗಳೇ ಚಿತ್ರೀಕರಣ ಮಾಡಿ ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ’ ಎಂದು ಸಂತ್ರಸ್ಥೆ ಯುವತಿ ಪರ ನ್ಯಾಯವಾದಿ ಕೆ.ಎನ್. ಜಗದೀಶ್‌ ಮಾಹಾದೇವ್ ಹೇಳಿದ್ದು, SIT ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ನಿನ್ನೆ (ಮಾ.30) ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ‌ವಿಶೇಷ ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ನೀಡಿದ್ದರು. ಆದರೆ ನ್ಯಾಯಾಲಯದಿಂದ ಸುಮಾರು 300ಮೀ. ದೂರದಿಂದ ಮಾಧ್ಯಮಗಳಿಗೆ ನಿರ್ಬಂಧಿಸಲಾಗಿತ್ತು. ಮಾಧ್ಯಮಗಳು ಸೆರೆ ಹಿಡಿಯದ ದೃಶ್ಯಗಳು ಮಾಧ್ಯಮಗಳಲ್ಲಿ ನಿನ್ನೆ ರಾತ್ರಿಯಿಂದ ಪ್ರಸಾರವಾಗಿದೆ.

ಈ ಬಗ್ಗೆ ಇಂದು ತನ್ನ ಫೇಸ್ಬುಕ್ ನಲ್ಲಿ ಮಾತನಾಡಿರುವ ಜಗದೀಶ್ ಮಹಾದೇವ್,ಪೊಲೀಸರು ಸಂತ್ರಸ್ತೆ ವೀಡಿಯೊ ಚಿತ್ರೀಕರಣ ಮಾಡಿ, ನಿರ್ಭಯಾ ಪ್ರಕರಣದಲ್ಲಿ‌ ರೂಪಿಸಲಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಮಿಷನರ್, ಎಸ್ಐಟಿ ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಅನುಮತಿ ನೀಡಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ.

ನಾನು ನಂದಿಯಲ್ಲ, ಜಗದೀಶ್: ‘ನನ್ನ ಮೇಲಿನ ಹಿಂದಿನ ಪ್ರಕರಣಗಳನ್ನು ಎಸ್ಐಟಿ ಕೆದಕುತ್ತಿದೆ. ನನ್ನನ್ನು ಏಕೆ ರೌಡಿಶೀಟರ್ ಮಾಡಿಲ್ಲ ಎಂದು ಎಸ್ಐಟಿ ಅಧಿಕಾರಿಗಳು, ಇನ್‌ಸ್ಪೆಕ್ಟರೊಬ್ಬರನ್ನು ತಮ್ಮ ಕಚೇರಿಗೆ ಕರೆಸಿ ಕೇಳಿದ್ದಾರೆ. ಓ‌ ಅಧಿಕಾರಿ ಎಚ್ಚರಿಕೆ‌ ಇರಲಿ, ನಾನು ನಂದಿಯಲ್ಲ, ಜಗದೀಶ. ನಿನ್ನ ಜಾತಕ ನನ್ನ ಬಳಿ ಇದೆ. ಬನ್ನಿ ಕಾನೂನು ಹೋರಾಟ ಮಾಡೋಣ. ನಾನು ರೆಡಿ’ ಎಂದೂ ಹೇಳಿದ್ದಾರೆ.

‘ಓ ಅಧಿಕಾರಿ, ನೀನು ಹೇಗೆ ನೇಮಕಾತಿ ಆದೆ. ವಿದ್ಯಾರಣ್ಯಪುರದಲ್ಲಿ ಹೇಗೆ ಮನೆ ಕಟ್ಟಿಸಿದೆ ಎಂಬುದೂ ಗೊತ್ತಿದೆ’ ಎಂದಿರುವ ಜಗದೀಶ್, ‘ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್‌ ಕೆರೆಹಳ್ಳಿ ಬಿಜೆಪಿ ಪರ ಬಕೆಟ್ ಹಿಡಿದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾನೂನಿನ ಮೂಲಕವೇ ತಕ್ಕ ಪಾಠ ಕಲಿಸುತ್ತೇನೆ’ ಎಂದರು.
‘ಇನ್‌ಸ್ಪೆಕ್ಟರ್ ಪುನೀತ್ ಅವರೇ ಸಂತ್ರಸ್ತೆ ಹಾಗೂ ಅವರ ಜೊತೆಗಿದ್ದವರ ವಿಡಿಯೊ ಚಿತ್ರೀಕರಣ ಮಾಡಿ ಮಾಧ್ಯಮದವರಿಗೆ ಕೊಟ್ಟಿದ್ದಾರೆ’ ಎಂದೂ ಆರೋಪಿಸಿದರು.
‘ನನ್ನ ಕುಟುಂಬವನ್ನೇ ಹಾಳು ಮಾಡಿದ ಭ್ರಷ್ಟ ಅಧಿಕಾರಿ. ಇವರೆಲ್ಲ ಭ್ರಷ್ಟ ಪೊಲೀಸ್ ಅಧಿಕಾರಿಗಳು. ಇವರ ಬಂಡವಾಳ ಬಯಲು‌ ಮಾಡುತ್ತೇನೆ’ ಎಂದರು.

‘ಓ ಪೊಲೀಸರೇ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ‌ ಮಾಡಿ. ಕಕ್ಷಿದಾರರ ಫೋಟೊ ‌ಹಾಗೂ ವಿಡಿಯೊ ತೆಗೆದಿದ್ದು ಯಾರು. ಸಂತ್ರಸ್ತೆಯ ಟ್ರಾವೆಲ್ ಹಿಸ್ಟರಿ ‌ಹುಡುಕುತ್ತೀರಲ್ಲ. ನಿಮ್ಮ ಪೋಲಿಸರ ಮೊಬೈಲ್ ನೋಡಿ ಮೊದಲು’ ಎಂದು ಹೇಳಿದರು.

Join Whatsapp
Exit mobile version