ಹೈದರಾಬಾದ್: ತೆಲುಗು ಹಿರಿಯ ನಟ ಮನ್ನವ ಬಾಲಯ್ಯ (94 ) ಇಂದು ಬೆಳಿಗ್ಗೆ ಹೈದರಾಬಾದ್ ನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಾಲಯ್ಯ ಅವರು ಟಾಲಿವುಡ್ನ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಜನಪ್ರಿಯರಾಗಿದ್ದರು.
ವಯೋಸಹಜ ಕಾಯಿಲೆಗಳಿಂದ ನಿಧನರಾಗಿರುವ ಬಾಲಯ್ಯ ಅವರ ವಿಯೋಗವು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ನಟ ಹಾಗೂ ಶಾಸಕ ಬಾಲಕೃಷ್ಣ ಸಂತಾಪ ಸೂಚಿಸಿದ್ದಾರೆ.
ಗುಂಟೂರು ಜಿಲ್ಲೆಯ ಅಮರಾವತಿ ಮಂಡಲದ ಚವುಪಾಡು ಎಂಬಲ್ಲಿ ಮನ್ನವ ಗುರವಯ್ಯ ಚೌಧರಿ ಹಾಗೂ ಅನ್ನಪೂರ್ಣಮ್ಮ ದಂಪತಿಯ ಮಗನಾಗಿ ಜನಿಸಿದ ಬಾಲಯ್ಯ ಅವರು ಟಾಲಿವುಡ್ನಲ್ಲಿ ಬರಹಗಾರ, ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿದ್ದರು. 1958 ರಲ್ಲಿ ಎತ್ತುಕು ಪೈ ಎತ್ತು ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.