ಹಿರಿಯ ಪತ್ರಕರ್ತ ವಿನೋದ್ ದುವ ನಿಧನ

Prasthutha|

ನವದೆಹಲಿ: ಹಿರಿಯ ಪತ್ರಕರ್ತ ವಿನೋದ್ ದುವ ಅವರು ಕೋವಿಡ್ ಸೋಂಕಿನ ಬಳಿಕ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಪುತ್ರಿ ಮಲ್ಲಿಕಾ ದುವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ ಪೋಸ್ಟ್ ನಲ್ಲಿ ಖಚಿತಪಡಿಸಿದ್ದಾರೆ.

- Advertisement -

ವೈದ್ಯರ ಸಲಹೆ ಮೇರೆಗೆ 67 ವರ್ಷದ ಪತ್ರಕರ್ತರಾದ ವಿನೋದ್ ದುವ ಅವರನ್ನು ಕಳೆದ ವಾರ ದೆಹಲಿಯ ಅಪೋಲೋ ಆಸ್ಪತ್ರೆಯ ಐ.ಸಿ.ಯು ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ದೂರದರ್ಶನ ಮತ್ತು ಎನ್.ಡಿ.ಟಿ.ವಿ ಯಲ್ಲಿ ಸೇವೆ ಸಲ್ಲಿಸಿದ್ದ ವಿನೋದ್ ದುವ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿದ್ದರು.

ಈ ವರ್ಷದ ಆರಂಭದಲ್ಲಿ ಎರಡನೇ ಕೋವಿಡ್ ಅಲೆಯ ವೇಳೆ ಸೋಂಕಿಗೆ ತುತ್ತಾಗಿದ್ದ ವಿನೋದ್ ದುವ, ಪದ್ಮಾವತಿ ದುವ ಅವರೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರೂ, ಪತ್ನಿ ಪದ್ಮಾವತಿ ಕಳೆದ ಜೂನ್ ನಲ್ಲಿ ನಿಧನರಾಗಿದ್ದರು.

- Advertisement -

ವಿನೋದ್ ದುವಾ ಅವರಿಗೆ 1996 ರಲ್ಲಿ ಪ್ರತಿಷ್ಠಿತ ರಾಮ್‌ ನಾಥ ಗೋಯೆಂಕಾ‌ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.‌  ಪತ್ರಿಕೋದ್ಯಮಕ್ಕೆ ಅವರು ಸಲ್ಲಿಸಿದ್ದ ಸೇವೆಗಾಗಿ ರಾಷ್ಟ್ರಪತಿಗಳು 2006 ನೇ ಇಸವಿಯಲ್ಲಿ ಪದ್ಮಶ್ರಿ ನೀಡಿ ಗೌರವಿಸಿದ್ದರು.

    2020ರಲ್ಲಿ ಕೇಂದ್ರ ಸರಕಾರದ ಕೋವಿಡ್ ಕಳಪೆ ನಿರ್ವಹಣೆಯನ್ನು ಟೀಕಿಸಿದ್ದುದಕ್ಕಾಗಿ ಶಿಮ್ಲಾದಲ್ಲಿ ಅವರ‌ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದ ವಿನೋದ್ ದುವಾ ಅವರ ಮೇಲಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

ಪುತ್ರಿಯರಾದ ನಟಿ ಮಲ್ಲಿಕಾ ದುವ ಮತ್ತು ಮನಶ್ಶಾಸ್ತ್ರಜ್ಞ ಬಕುಲ್ ದುವ ಎಂಬವರನ್ನು ಅಗಲಿದ್ದಾರೆ.

Join Whatsapp