ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ನಿಧನ

Prasthutha|

ಬೆಂಗಳೂರು:  ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ನಿಧನರಾಗಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

- Advertisement -

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಚವತ್ತಿ ನಿವಾಸಿಯಾಗಿದ್ದ ಪ್ರಸಾದ್ ಹೆಗಡೆ, ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.  ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.  

 ರಾಜ್ ನ್ಯೂಸ್ ನಲ್ಲಿ ಔಟ್ ಪುಟ್ ಚೀಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು,  ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿ ಮೈಸೂರು ದಿಗಂತ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದರು. ಬಳಿಕ ಹಲೋ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯಲ್ಲಿ ಕೆಲ ಮಾಡಿದ್ದರು. ನಂತರ ರಾಜಧಾನಿ ಬೆಂಗಳೂರಿಗೆ ಬಂದು ದೃಶ್ಯ ಮಾಧ್ಯಮದಲ್ಲಿ ತನ್ನ ವೃತ್ತಿಯನ್ನು ಮುಂದುವರಿಸಿದರು, ಕಸ್ತೂರಿ ಟಿವಿಯಲ್ಲಿ ರಾಜಕೀಯ ವರದಿಗಾರರಾಗಿ, ನಿರೂಪಕರಾಗಿ, ರಾಜಕೀಯ ವಿಶ್ಲೇಷಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಪ್ರಜಾ ಟಿವಿ, ದಿಗ್ವಿಜಯ ನ್ಯೂಸ್, ನ್ಯೂಸ್ ಫಸ್ಟ್ ಸಂಸ್ಥೆಗಳಲ್ಲಿಯೂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

- Advertisement -

ಪ್ರಸಾದ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ ಅವರ ನಿಧನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಶೋಕ

  ಹಿರಿಯ ಪತ್ರಕರ್ತರಾದ ಪ್ರಸಾದ್ ಹೆಗಡೆ ಅವರ ಅಕಾಲಿಕ ಮರಣಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪ್ರಸಾದ್ ಹೆಗಡೆ ಅವರು ವೃತಿಪರ ಹಾಗೂ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಬಹುಕಾಲದಿಂದ ನಾನು ವೈಯಕ್ತಿಕವಾಗಿ ಬಲ್ಲವರಾಗಿದ್ದ ಪ್ರಸಾದ್ ಹೆಗಡೆ ಅವರು ನಿಧನರಾದ ವಾರ್ತೆ ಕೇಳಿ ಬಹಳ ದುಃಖವಾಯಿತು. ಅವರು ಕಸ್ತೂರಿ ವಾಹಿನಿ ಸೇರಿದಂತೆ ನಾಡಿನ ಹಲವಾರು ಸುದ್ದಿವಾಹಿನಿಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮದಲ್ಲಿ ಅವರು ವೃತ್ತಿ ಬದ್ಧತೆಯ ಜತೆಗೆ, ಅಚಲ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಅದನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Join Whatsapp