ಹಿರಿಯ ದಲಿತ ಮುಖಂಡ, ಹೋರಾಟಗಾರ ಪಿ.ಡೀಕಯ್ಯ ನಿಧನ

Prasthutha|

ಮಂಗಳೂರು: ಬಹುಜನ ಚಳವಳಿಯ ಹಿರಿಯ ನಾಯಕ, ದಲಿತ ಮುಖಂಡ, ಬರಹಗಾರ ಪಿ. ಡೀಕಯ್ಯ ಅವರು ಕಳೆದ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

- Advertisement -

ಬೆಳ್ತಂಗಡಿಯ ಪದ್ಮುಂಜ ನಿವಾಸಿಯಾದ ಡೀಕಯ್ಯ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರು ತಮ್ಮ ಬಹು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಇಂದು ಮಧ್ಯಾಹ್ನ ಪದ್ಮುಂಜದಲ್ಲಿರುವ ಅವರ ನಿವಾಸದ ಬಳಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸಿದ ಪಿ.ಡೀಕಯ್ಯನವರು,  ಕಾನದ ಕಟದರ ಇತಿಹಾಸದ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದರು. ಬರಹಗಾರರೂ ಆಗಿದ್ದ ಡೀಕಯ್ಯ ಅವರು ಮನುವಾದದ ಕಡು ವಿರೋಧಿಯಾಗಿದ್ದರು. ಅಸ್ಪೃಶ್ಯತೆ ಅಸಮಾನತೆ ವಿರುದ್ಧ ಜೀವನದುದ್ದಕ್ಕೂ ಹೋರಾಟ ನಡೆಸಿದ್ದ ಅವರು ಪತ್ನಿ ಅತ್ರಾಡಿ ಅಮೃತ ಶೆಟ್ಟಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

- Advertisement -

ಡೀಕಯ್ಯ ಅವರ ನಿಧನಕ್ಕೆ ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಸಂತಾಪ ಸೂಚಿಸಿದ್ದು, ಡೀಕಯ್ಯ ನಿಧನ  ಸುದ್ದಿಯನ್ನು ಅರಗಿಸಿಕೊಳ್ಳುವುದು ನನಗೆ ಕಷ್ಟ. ಕರ್ನಾಟಕದ ಇತರೆಡೆಗಳಲ್ಲಿ (80ರ ದಶಕ) ದಲಿತ ಚಳುವಳಿ ಜೋರಾಗಿ ಬೆಳೆಯುತ್ತಿದ್ದಾಗ ಅದನ್ನು ತುಳುನಾಡಿನಲ್ಲಿ ಕಟ್ಟಿ ಬೆಳೆಸಿದವರು ಡೀಕಯ್ಯ. ಬೆಳ್ತಂಗಡಿಯ ಪದ್ಮುಂಜದಲ್ಲಿ ಹುಟ್ಟಿದ ಅವರು ಮುಂದೆ ಕರಾವಳಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಸುತ್ತಾಡಿದರು. ಸಮಾಜ ಪರಿವರ್ತನೆಯ ಕನಸನ್ನು ಕಟ್ಟುತ್ತಾ ನನ್ನಂಥವನನ್ನೂ ಚಳುವಳಿಯ ಕಡೆ ಸೆಳೆದರು. ದಲಿತರನ್ನು ಸಂಘಟಿಸಿದರು. ದೇವಸ್ಥಾನಗಳನ್ನು ಹೊಕ್ಕರು. ಬಿಕ್ಕಟ್ಟಿನ ಕ್ಷಣಗಳಲ್ಲಿ ಹೋರಾಟಗಾರರ ಜೊತೆ ಗಟ್ಟಿಯಾಗಿ ನಿಂತರು. ಅಂಬೇಡ್ಕರ್ ಬರಹಗಳನ್ನು ತನ್ನೊಡನಿದ್ದ ಜನರಿಗೆ ಓದಿ ಹೇಳಿದರು. ದಲಿತರದೇ ಯಕ್ಷಗಾನ ತಂಡ ಕಟ್ಟಿದರು. ಅವರನ್ನು ಕಳಕೊಂಡು ನಾವು ಬಡವಾದೆವು ಎಂದು ಫೇಸ್ ಬುಕ್ ನಲ್ಲಿ ಸಂತಾಪ ಸೂಚಿಸಿದ್ದಾರೆ.



Join Whatsapp