ನವದೆಹಲಿ: ತರಗತಿಗಳಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟಿನ ತೀರ್ಪು ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವ ಸಾರ್ವತ್ರಿಕ ಹಕ್ಕಿನ ವಿರುದ್ಧದ ಒಂದು ಹೊಡೆತವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಪಾಲಿಟ್ ಬ್ಯರೊ ಹೇಳಿದೆ.
ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಧರಿಸುವ ಶಿರವಸ್ತ್ರವನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಂದೂ ಸಾಮಾನ್ಯ ಸಮವಸ್ತ್ರದ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗಿಲ್ಲ. ಅತ್ಯುತ್ತಮ ಉದಾಹರಣೆಯೆಂದರೆ, ನೆರೆಯ ಕೇರಳದಲ್ಲಿ – ಶಾಲೆಗಳಲ್ಲಿ ಮತ್ತು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮ್ ಹುಡುಗಿಯರು ಅತಿ ಹೆಚ್ಚು ಭಾಗವಹಿಸುವ ದಾಖಲೆಯನ್ನು ಹೊಂದಿರುವ ರಾಜ್ಯವದು.
ಆದರೆ, ಈ ತೀರ್ಪು ಶಾಸಕರ ನೇತೃತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿನ ಸಮಿತಿಗಳಿಗೆ ಈ ಬಗ್ಗೆ ನಿರ್ಧರಿಸುವ ಹಕ್ಕನ್ನು ನೀಡುತ್ತದೆ. ಕರ್ನಾಟಕದಲ್ಲಿ ಈ ಶಾಸಕರು ತಮ್ಮದೇ ಆದ ಸಂಕುಚಿತ ಅಜೆಂಡಾಗಳನ್ನು ಮತ್ತು ಪೂರ್ವಗ್ರಹಗಳನ್ನು ಹೊಂದಿರಬಹುದು. ಈ ಅಜೆಂಡಾ ಕೋಮು ಧ್ರುವೀಕರಣದ ಬಿಜೆಪಿಯ ಒಟ್ಟಾರೆ ನಿಲುವಿಗೆ ಸರಿಹೊಂದುತ್ತದೆ ಎಂದು ನೋಡುವಾಗ, ಕರ್ನಾಟಕ ಹೈಕೋರ್ಟ್ ತೀರ್ಪು ಭಾರತದಾದ್ಯಂತ ಅಪಾಯಕಾರಿ ಸರಣಿ ಪರಿಣಾಮವನ್ನು ಬೀರಬಹುದು ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಸಂದೇಹ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ವಿಳಂಬ ಮಾಡದೆ ಮೇಲ್ಮನವಿಗಳ ವಿಚಾರಣೆ ನಡೆಸಬೇಕು ಎಂದಿರುವ ಪೊಲಿಟ್ಬ್ಯುರೊ, ದೇಶದ ಅತ್ಯುಚ್ಚ ನ್ಯಾಯಾಲಯವು ಸಾಂವಿಧಾನಿಕ ಖಾತರಿಗಳನ್ನು ಎತ್ತಿಹಿಡಿಯುತ್ತದೆ ಮತ್ತು ನ್ಯಾಯವನ್ನು ನೀಡುತ್ತದೆ ಎಂದು ಆಶಿಸಿದೆ.