►3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್ ಪಾಸ್?
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಸಂಚಾರಕ್ಕಾಗಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆಯು ಇನ್ನು 15 ದಿನಗ ಲ್ಲಿ ಜಾರಿಗೆ ಬರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಗಡ್ಕರಿ, ಭಾರತದ ರಸ್ತೆ ಮೂಲ ಸೌಕರ್ಯವನ್ನು ಆಧುನೀಕರಿಸುವ ಸರ್ಕಾರದ ಹೊಸ ಯೋಜನೆ ಇದಾಗಿದೆ ಎಂದರು.
ಟೋಲ್ ಬೂತ್‌ನಲ್ಲಿ ಉದ್ದನೆ ಸಾಲು, ನಿಲ್ಲುವುದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಈ ಯೋಜನೆ ಅಡಿಯಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳು ನಿಲ್ಲುವ ಅಗತ್ಯವಿರುವುದಿಲ್ಲ. ಬದಲಿಗೆ ಸ್ಯಾಟಲೈಟ್ ಟ್ರ್ಯಾಕಿಂಗ್‌ನಿಂದ ವಾಹನ ಸವಾರರ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಹಣ ಕಟ್ ಆಗುತ್ತದೆ ಎಂದರು.
ದೇಶದ ಹೆದ್ದಾರಿ ವ್ಯವಸ್ಥೆ ಮೇ 1 ರಿಂದ ಭಾರೀ ಸುಧಾರಣೆ ಕಾಣಲಿದೆ ಎನ್ನಲಾಗುತ್ತಿದ್ದು, ಹೊಸ ಟೋಲ್ ನೀತಿ ಜಾರಿಗೆ ಬರಲಿದೆ. ಸೋಮವಾರ ಮಾತನಾಡಿದ್ದ ನಿತಿನ್ ಗಡ್ಕರಿ ಅವರು ಹೊಸ ಟೋಲ್ ಪಾಲಿಸಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಟೋಲ್ ನೀತಿಯನ್ನು ಘೋಷಿಸಲಿದೆ. ಅದು ಜಾರಿಯಾದ ಬಳಿಕ ಟೋಲ್‌ಗಳ ಬಗ್ಗೆ ದೂರು ನೀಡಲು ಯಾವುದೇ ಕಾರಣಗಳು ಇರಲ್ಲ ಎಂದಿದ್ದಾರೆ. ಅದಲ್ಲದೇ ಹೊಸ ವ್ಯವಸ್ಥೆಯಲ್ಲಿ ಟೋಲ್ ಪ್ಲಾಜಾಗಳೇ ಇರಲ್ಲ ಎನ್ನಲಾಗಿದ್ದು, ವಾಹನಗಳ ಸ್ಯಾಟಲೈಟ್ ಟ್ರಾಕಿಂಗ್, ವಾಹನದ ನಂಬರ್ ಪ್ಲೇಟ್ ಮೂಲಕ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದ್ದು, ಮ್ಯಾನ್ಯುವಲ್ ಟೋಲ್ ಸಂಗ್ರಹ ಬಂದ್ ಆಗಲಿದೆ ಎಂದು ಕೂಡ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳ ಬಳಕೆ ಉಚಿತ?
ಇದರ ಜೊತೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿ ಹೆಚ್ಚಿನ ಟೋಲ್ ಪಾವತಿಸುತ್ತಿರುವ ವಾಹನ ಸವಾರರಿಗೆ ರಿಲೀಫ್ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ಎರಡು ಪ್ರಸ್ತಾವನೆಗಳನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗೆ ಕಳುಹಿಸಲಾಗಿದೆ. ಇದರಲ್ಲಿ ಕಿರಿದಾದ ರಾಷ್ಟ್ರೀಯ ಹೆದ್ದಾರಿಗಳು ಅಂದರೆ ಎರಡೂವರೆ ಪಥದ ಹೆದ್ದಾರಿಗಳನ್ನು ಟೋಲ್ ಮುಕ್ತಗೊಳಿಸುವ ಪ್ರಸ್ತಾಪ ಕೂಡ ಹಣಕಾಸು ಇಲಾಖೆಗೆ ಸಲ್ಲಿಕೆಯಾಗಿದೆ. ಜೊತೆಗೆ ಸುಮಾರು 3,000 ರೂ. ವೆಚ್ಚದ ವಾರ್ಷಿಕ ಟೋಲ್ ಪಾಸ್ ಅನ್ನು ನೀಡುವ ಪ್ರಸ್ತಾಪವನ್ನು ಕೂಡ ಹಣಕಾಸು ಇಲಾಖೆ ಮುಂದೆ ಇಡಲಾಗಿದೆ. ವಾರ್ಷಿಕ ಪಾಸ್‌ಗಳ ಕಲ್ಪನೆ ಟೋಲ್
ಆದಾಯಕ್ಕೆ ಕೊಂಚ ಹೊಡೆತ ನೀಡುವ ನಿರೀಕ್ಷೆಯಿದೆ ಎನ್ನಲಾಗಿದ್ದು, ಕಿರಿದಾದ ಹೆದ್ದಾರಿಗಳಲ್ಲಿ ಟೋಲ್ ಕಲೆಕ್ಷನ್ ನಿಲ್ಲಿಸಿದರೆ ಆದಾಯಕ್ಕೆ ಹೆಚ್ಚೇನು ಹೊಡೆತ ಬೀಳಲ್ಲ ಎನ್ನಲಾಗಿದೆ. ಈ ಎರಡು ಪ್ರಸ್ತಾಪಗಳಿಗೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಮೇ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್ ಪಾಸ್?
ತಡೆ ಮುಕ್ತ ಟೋಲ್ ನೀತಿಯನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ವಾಹನ ಸವಾರರಿಗೆ ಟೋಲ್ ಶುಲ್ಕವನ್ನು ಶೇ.50ರಷ್ಟು ಕಡಿಮೆಯಾಗಲಿದೆ. ಹೊಸ ನೀತಿಯು ಟೋಲ್ ಪ್ಲಾಜಾ ಬದಲಾಗಿ ಪ್ರತಿ ಕಿಲೋ ಮೀಟರ್‌ಗೆ ಇಷ್ಟು ಎಂದು ಶುಲ್ಕವನ್ನು ವಿಧಿಸಲಿದೆ. ಇನ್ನೂ ಪ್ರಯಾಣಿಕರು 3,000 ರೂಪಾಯಿಗೆ ವಾರ್ಷಿಕ ಟೋಲ್ ಪಾಸ್ ಅನ್ನು ಖರೀದಿಸಬಹುದಾಗಿದ್ದು, ಈ ಪಾಸ್ ಮೂಲಕ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಪ್ರಯಾಣವನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಪಾಸ್ ಅನ್ನು ನೀಡುವುದಿಲ್ಲ. ವಾರ್ಷಿಕ ಟೋಲ್ ಶುಲ್ಕವನ್ನು ನೇರವಾಗಿ ಫಾಸ್ಟ್‌ಟ್ಯಾಗ್ ಖಾತೆ ಮೂಲಕ ಕಟ್ ಮಾಡಲಾಗುತ್ತದೆ. ಆದರೆ, ಈ ಟೋಲ್ ಪಾಸ್ ನಿಗದಿತ ಟೋಲ್‌ಗಳಲ್ಲಿ ಮಾತ್ರ ಇರಲಿದೆಯಾ ಅಥವಾ ದೇಶದ ಎಲ್ಲ ಟೋಲ್ ಪ್ಲಾಜಾಗಳಿಗೂ ಅನ್ವಯಿಸುತ್ತಾ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ.