Home ಟಾಪ್ ಸುದ್ದಿಗಳು ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ

ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ

ಜ್ಞಾನ ಪ್ರಕಾಶ್ (ಎಡದಿಂದ ಮೂರನೆಯವರು)

ಮೈಸೂರು: 1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅವರು ಜಾಮೀನಿನ ಮೇಲೆ ಮಂಗಳವಾರ ಬೆಳಿಗ್ಗೆ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾರೆ.


ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಜ್ಞಾನಪ್ರಕಾಶ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಮಾನವೀಯತೆ ಆಧಾರದ ಮೇಲೆ ನ.26ರಂದು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.


ಜ್ಞಾನಪ್ರಕಾಶ್ ಅವರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಸಂದನಪಾಳ್ಯ ನಿವಾಸಿಯಾಗಿದ್ದಾರೆ. 1997 ರಲ್ಲಿ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಜ್ಞಾನಪ್ರಕಾಶ್,ಮೀಸೆಕಾರ ಮಾದಯ್ಯ, ಸೈಮನ್, ಬಿಲವೇಂದ್ರನ್ ಎಂಬವರಿಗೆ ಮೈಸೂರಿನ ಟಾಡಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತ್ತು.


ವೀರಪ್ಪನ್ 2004ರ ಅ.18ರಂದು ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದ. ನಂತರದ ಕೆಲವು ವರ್ಷಗಳ ಬಳಿಕ ಸೈಮನ್, ಬಿಲವೇಂದ್ರನ್ ನಿಧನರಾಗಿದ್ದು, ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್ ಮಾತ್ರ ಉಳಿದಿದ್ದರು.


2014ರಲ್ಲಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯಿಂದ ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು. ಕಳೆದ 29 ವರ್ಷಗಳಿಂದ ಬೆಳಗಾವಿಯ ಹಿಂಡಲಗ ಹಾಗೂ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ 68ವರ್ಷದ ಜ್ಞಾನ ಪ್ರಕಾಶ್, ಒಂದೂವರೆ ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


1993ರ ಪಾಲಾರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವೀರಪ್ಪನ್ ಸೇರಿದಂತೆ 124 ಮಂದಿ ಸಹಚರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅಂದಿನ ಎಸ್‌ ಟಿಎಫ್ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರು ವೀರಪ್ಪನ್ ಸೆರೆಗಾಗಿ ತಮ್ಮ ತಂಡದೊಂದಿಗೆ ಮಲೈ ಮಹದೇಶ್ವರ ಬೆಟ್ಟದ ಸುತ್ತ ಕಾರ್ಯಾಚರಣೆ ತೀವ್ರಗೊಳಿಸಿ, ಮೂರು ತಿಂಗಳ ಬಳಿಕ ವೀರಪ್ಪನ್ ಸಹಚರರಾದ ಮೀಸೆಕಾರ ಮಾದಯ್ಯ, ಜ್ಞಾನ ಪ್ರಕಾಶ್, ಸೈಮನ್ ಮತ್ತು ಬಿಲವೇಂದ್ರನ್ ಅವರನ್ನು ಬಂಧಿಸಿದ್ದರು.


ವಕೀಲ ಬಾಬುರಾಜ್ ಅವರು ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಜ್ಞಾನ ಪ್ರಕಾಶ್ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಇಬ್ಬರಿಂದ ಶ್ಯೂರಿಟಿ ಹಾಗೂ ₹ 5 ಲಕ್ಷದ ಬಾಂಡ್ ಅನ್ನು ನ್ಯಾಯಾಲಯವು ಪಡೆದಿತ್ತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಟ್ ಅವರಿಗೆ ಜ್ಞಾನ ಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

Join Whatsapp
Exit mobile version