ಹೊಸದಿಲ್ಲಿ: ಭಾರತೀಯ ಪುರಾತತ್ವ ಇಲಾಖೆಯು ಕಾಶಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಇಂದು(ಸೋಮವಾರ) ಆರಂಭಿಸಿದೆ.
ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂಬ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಆದೇಶ ನೀಡಿದೆ. ಹಿಂದೂ ದೇವತೆಗಳ ಪುರಾತನ ವಿಗ್ರಹಗಳು ಮಸೀದಿಯೊಳಗೆ ನೆಲೆಗೊಂಡಿವೆ ಮತ್ತು ವೈಜ್ಞಾನಿಕ ಸಮೀಕ್ಷೆಯಿಂದ ಮಾತ್ರ ಸತ್ಯವನ್ನು ಬಹಿರಂಗಪಡಿಸಬಹುದು ಎಂದು ದಾವೆದಾರರು ಅರ್ಜಿ ಸಲ್ಲಿಸಿದ್ದರು.
ಒಂದು ವರ್ಷದ ಹಿಂದೆ ನಡೆದ ವೀಡಿಯೋಗ್ರಾಫಿಕ್ ಸಮೀಕ್ಷೆಯ ನಂತರ ಜ್ಞಾನವಾಪಿ ಮಸೀದಿಯ ವುಝೂಖಾನಾ ಪ್ರದೇಶವನ್ನು ಸೀಲ್ ಮಾಡುವಂತೆಯೂ ನ್ಯಾಯಾಲಯ ಸೂಚಿಸಿತ್ತು.
ಈ ಹಿಂದೆ, ಹಿಂದೂ ಅರ್ಜಿದಾರರು ಶಿವಲಿಂಗ ಎಂದು ಪ್ರತಿಪಾದಿಸಿದ ರಚನೆಯ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಎಎಸ್‌ಐಗೆ ನಿರ್ದೇಶನ ನೀಡಿತ್ತು. ಈ ರಚನೆಯು ವುಝೂಖಾನಾ ದಲ್ಲಿ ಕಾರಂಜಿಯ ಒಂದು ಭಾಗವಾಗಿದೆ ಎಂದು ಹೇಳಲಾಗಿತ್ತು.
ಮಸೀದಿಯ ವುಝೂಖಾನಾದಲ್ಲಿ ಶಿವಲಿಂಗದಂಥ ರಚನೆ ಇದೆ ಎಂದು ಹೇಳಲಾಗಿರುವ ಕಾರಣ, ಆ ಸ್ಥಳದ ಸಂರಕ್ಷಣೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಾಗಿ ಆ ನಿರ್ದಿಷ್ಟ ಜಾಗ ಹೊರತುಪಡಿಸಿ ಉಳಿದೆಲ್ಲಾ ಕಡೆ ಸಮೀಕ್ಷೆ ನಡೆಯಲಿದೆ.