ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಹಾಲಿ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಅವರ ಅವಧಿ ಮೇ 31 ಕ್ಕೆ ಮುಕ್ತಾಯಗೊಳ್ಳಲಿದೆ. 1986ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ವಂದಿತಾ ಶರ್ಮಾ ಹಾಲಿ ರಾಜ್ಯಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿದ್ದಾರೆ. ಮುಂದಿನ ವರ್ಷ ನವೆಂಬರ್ ವರೆಗೆ ಅಧಿಕಾರಾವಧಿ ಇರಲಿದೆ.
ಕರ್ನಾಟಕದ ಮೊದಲ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ ಆನಂತರ ಮಾಲತಿ ದಾಸ್ ಅವರು ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಕೆ ರತ್ನಪ್ರಭಾ ಕೂಡ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ವಂದಿತಾ ಶರ್ಮ ಈ ಸ್ಥಾನವನ್ನು ಅಲಂಕರಿಸುವ ನಾಲ್ಕನೇ ಮಹಿಳೆಯಾಗಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಇವರ ಪತಿ ಐ ಎಸ್ ಎನ್ ಪ್ರಸಾದ್ ಕೂಡ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈಗ ಕರ್ನಾಟಕದ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಪತಿ ಪ್ರಸಾದ್ ಅವರು ಪತ್ನಿ ವಂದಿತಾ ಶರ್ಮ ಅವರ ಕೆಳಗೆ ಕೆಲಸ ಮಾಡುವುದು ವಿಶೇಷ.